ಬೆಂಗಳೂರು: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಕನಕಪುರವನ್ನು ಸೇರ್ಪಡೆ ಮಾಡುವ ಬಗ್ಗೆ ಜನರ ಅಭಿಪ್ರಾಯ ಕೇಳುತ್ತಿದ್ದೇನೆ. ಬುದ್ಧಿವಂತಿಕೆ ಇಲ್ಲದಿದ್ದರೂ ನಡೆಯುತ್ತದೆ, ಪ್ರಜ್ಞಾವಂತಿಕೆ ಇರಬೇಕು. ನಾವು ಬೆಂಗಳೂರಿನವರು, ಬೆಂಗಳೂರಲ್ಲೇ ಇರಬೇಕು. ರಾಮನಗರ ಛಿದ್ರ ಮಾಡಿದವರು ನಾವಲ್ಲ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಂದು ತಿರುಗೇಟು ಕೊಟ್ಟರು.
ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಮನಗರದಲ್ಲಿ ಕುಮಾರಸ್ವಾಮಿ ಆಸ್ತಿ ಮಾಡಿಲ್ಲವೇ?. ಜಮೀನು ರೇಟ್ ಎಷ್ಟಿದೆ ಕೇಳಿ?. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ಬನ್ನಿ ಚರ್ಚೆ ಮಾಡೋಣ. ಯಾವುದೇ ಮಾಧ್ಯಮದ ವೇದಿಕೆಗೆ ಬಂದರೂ ಸರಿ, ನಾನು ಬರುತ್ತೇನೆ ಎಂದು ಕುಮಾರಸ್ವಾಮಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
ನಾವು ಬೆಂಗಳೂರಿನವರು. ಹೊಸಕೋಟೆ, ನೆಲಮಂಗಲ, ಮಾಗಡಿ, ಚನ್ನಪಟ್ಟಣ, ರಾಮನಗರ ಮತ್ತು ಕನಕಪುರದವರೆಲ್ಲಾ ಬೆಂಗಳೂರಿನವರೇ. ನಾನು ನನ್ನ ಜನರಿಗೆ ತಿಳಿವಳಿಕೆ ಹೇಳುವೆ. ನೀವೂ ಆಸ್ತಿ ಮಾಡಿಲ್ಲವೇ? ನಾವೇನಾದರೂ ತಕರಾರು ಮಾಡುತ್ತಿದ್ದೇವಾ? ವಿದ್ಯೆಗೋಸ್ಕರ ಎಷ್ಟು ಜಮೀನು ದಾನ ಮಾಡಿದ್ದೇನೆ ಎಂಬ ಅರಿವಿದೆಯೇ? ರಾಮನಗರ ಜಿಲ್ಲೆಯಲ್ಲಿ ಮೂರು ಬಿಲ್ಡಿಂಗ್ ಕಟ್ಟಿದ್ದೀರಿ, ಶುಭ ಹಾರೈಸುತ್ತೇನೆ. ಕ್ಷೇತ್ರದ ಶ್ರೇಯಸ್ಸು ಬೆಳೆಸಬೇಕಾದ್ದು ನಮ್ಮ ಕರ್ತವ್ಯ ಎಂದು ವಾಗ್ದಾಳಿ ನಡೆಸಿದರು.