ಬೆಂಗಳೂರು: ಸಾರಿಗೆ ಕಾರ್ಮಿಕರ ಸಂಘಟನೆ ಜೊತೆಗೆ ಒಂದು ಸುತ್ತಿನ ಸಭೆ ನಡೆಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಅಧಿಕಾರಿಗಳ ಜೊತೆ ಇದೀಗ ಪ್ರತ್ಯೇಕ ಸಭೆ ನಡೆಸಿ ಬಳಿಕ ಬೇಡಿಕೆ ಪಟ್ಟಿಯೊಂದಿಗೆ ಸಿಎಂ ಭೇಟಿ ಮಾಡಲು ತೆರಳಿದ್ದಾರೆ.
ಸಾರಿಗೆ ಕಾರ್ಮಿಕ ಸಂಘಟನೆ ಜೊತೆ ಸಭೆ ನಡೆಸಿದ ಸಚಿವ ಸವದಿ, ಸಾರಿಗೆ ನೌಕರರ ಬೇಡಿಕೆಗಳನ್ನು ಆಲಿಸಿದರು. ಇದರ ಜೊತೆಗೆ ಸರ್ಕಾರದ ನಿಲುವನ್ನೂ ಸ್ಪಷ್ಟಪಡಿಸಿದರು. ಒಂದು ತಾಸು ಸಭೆ ನಡೆಸಿದ ಬಳಿಕ ಸವದಿ ತಮ್ಮ ಚೇಂಬರ್ನಲ್ಲಿ ಪ್ರತ್ಯೇಕವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಾರಿಗೆ ನೌಕರರ ಸಂಘಟನೆ ಮುಂದಿಟ್ಟ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ, ಬೇಡಿಕೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿದ ಡಿಸಿಎಂ, ಕಾರ್ಮಿಕ ಸಂಘಟನೆ ಇಟ್ಟ ಬೇಡಿಕೆಗಳ ಪಟ್ಟಿಯೊಂದಿಗೆ ಸಿಎಂ ಭೇಟಿಯಾಗಲು ತೆರಳಿದರು.
ಸಿಎಂ ಜೊತೆ ಚರ್ಚಿಸಿದ ಬಳಿಕ ಮತ್ತೆ ಸಂಘಟನೆ ಜೊತೆ ಸಭೆ ಮುಂದುವರೆಯಲಿದ್ದು, ಸರ್ಕಾರದ ತೀರ್ಮಾನ ಹೇಳಲಿದ್ದಾರೆ. ಮೊದಲ ಸುತ್ತಿನ ಸಭೆಯಲ್ಲಿ ಸಾರಿಗೆ ನೌಕರರ ಸಂಘಟನೆ ಮುಖಂಡರು, ನಮ್ಮ ಮನವಿ ಮತ್ತು ಬೇಡಿಕೆ ನೇರವಾಗಿ ಇದೆ. ಕೋಡಿಹಳ್ಳಿ ಬೇಡಿಕೆ ಏನು ಅನ್ನೋದು ನೀವೇ ಕರೆದು ಮಾತನಾಡಿ. ನಮ್ಮ ನಿಲುವಿಗೆ ನಾವು ಬದ್ಧ. ಅವರನ್ನ ನೀವೇ ಕರೆದು ಮಾತನಾಡಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಸಿ ಎಂ ಇಬ್ರಾಹಿಂ ಭೇಟಿ ಮಾಡಿದ ಡಿಕೆಶಿ.. ಪಕ್ಷ ಬಿಡದಂತೆ ಮನವೊಲಿಸುವ ಯತ್ನ..
ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸಿದ್ರೆ ಮುಷ್ಕರ ಕೈಬಿಡಲು ಕರೆ ನೀಡುತ್ತೇವೆ ಎಂದು ಸಾರಿಗೆ ಕಾರ್ಮಿಕ ಸಂಘಟನೆ ಮುಖಂಡರು ಭರವಸೆ ನೀಡಿದ್ದಾರೆ. ಸಭೆಯಲ್ಲಿ ಡಿಸಿಎಂ ಸವದಿ, ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಇದನ್ನ ಸಿಎಂ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ನಿಮ್ಮ ಇತರ ಬೇಡಿಕೆ ಈಡೇರಿಸುವ ಭರವಸೆ ಕೊಡುತ್ತೇವೆ. ಎಲ್ಲ ಬೇಡಿಕೆ ಏಕಾಏಕಿ ಈಡೇರಿಸಲು ಆಗಲ್ಲ. ಒಂದೊಂದೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.