ಬೆಂಗಳೂರು: ಸಾರಿಗೆ ಮುಷ್ಕರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೋರಾಟಗಾರರ ಕೆಲ ಬೇಡಿಕೆ ಈಡೇರಿಕೆಗೆ ನಿರ್ಧಾರ ಕೈಗೊಂಡು ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.
ಅದರಂತೆ ಡಿಸಿಎಂ ಸವದಿ ನೇತೃತ್ವದಲ್ಲಿ ಸಚಿವರ ತಂಡ ವಿಕಾಸಸೌಧಕ್ಕೆ ತೆರಳಿದ್ದು, ಸದ್ಯದಲ್ಲೇ ಯೂನಿಯನ್ ಮುಖಂಡರ ಜೊತೆ ಕೊನೆ ಸುತ್ತಿನ ಮಾತುಕತೆಯನ್ನು ನಡೆಸಲಿದೆ.
ಸಾರಿಗೆ ನೌಕರರ ಕೆಲ ಬೇಡಿಕೆ ಈಡೇರಿಕೆಗೆ ಸಿಎಂ ಅಸ್ತು:
ಸಿಎಂ ಜೊತೆಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ನಮ್ಮ ಸಾರಿಗೆ ನೌಕರರ ಪ್ರಮುಖರನ್ನು ಕರೆದು ಎರಡು ಸುತ್ತಿನ ಮಾತುಕತೆಯನ್ನು ಮುಗಿಸಲಾಗಿದೆ. ಸರ್ಕಾರ ಕೂಡ ಕೆಲವೊಂದು ಬೇಡಿಕೆಗೆ ಸಹಮತ ಕೊಟ್ಟಿದೆ. ಸಿಬ್ಬಂದಿ ಸುಮಾರು 10 ಬೇಡಿಕೆಗಳನ್ನು ಕೇಳಿದ್ದರು. ಅದರಲ್ಲಿ ಈಡೇರಿಕೆ ಮಾಡುವ ಕುರಿತು ನಮ್ಮ ಹಣಕಾಸು ಇತಿಮಿತಿಯೊಳಗೆ ನಾವು ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಅವರು ಕೂಡ ಒಂದು ಹೆಜ್ಜೆ ಹಿಂದೆ ಸರಿದು ಎಲ್ಲಾ ಚರ್ಚೆ ಆಗಿದೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಲಾಗಿದೆ. ಸಿಎಂ ಒಪ್ಪಿಗೆ ಪಡೆದು ಕೊನೆಯ ಸುತ್ತಿನ ಮಾತುಕತೆ ನಡೆಸಿ ಅರ್ಧ ಗಂಟೆಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಅಂತ್ಯವನ್ನು ಹಾಡುವ ನಿರ್ಣಯವನ್ನು ಮಾಡಿದ್ದೇವೆ. ಯೂನಿಯನ್ ಮುಖಂಡರ ಸಮಕ್ಷಮದಲ್ಲಿ ವಿಧಾನಸೌಧದಲ್ಲಿ ಪ್ರಕಟಣೆಯನ್ನು ಕೊಟ್ಟು ಇಂದು ಮುಷ್ಕರದ ಸಮಸ್ಯೆಯನ್ನು ಮುಗಿಸುವ ತೀರ್ಮಾನಕ್ಕೆ ನಾವೆಲ್ಲ ಬಂದಿದ್ದೇವೆ ಎಂದರು.