ಬೆಂಗಳೂರು:ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಹಲವಾರು ಅಮಾಯಕರ ಸಾವು ನೋವುಗಳನ್ನು ತಡೆದಂತಹ ಕೀರ್ತಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸಲ್ಲುತ್ತದೆ. ಈ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕರ್ನಾಟಕವು ಶಾಂತಿಪ್ರಿಯ ನಾಡಾಗಿದೆ. ಇಲ್ಲಿ ಭಯೋತ್ಪಾದನೆ ಅಥವಾ ದುಷ್ಕೃತ್ಯಗಳನ್ನು ನಡೆಸುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳ ಆಟ ನಮ್ಮ ಸರ್ಕಾರ ಮತ್ತು ಸಮರ್ಥ ಪೊಲೀಸರ ಎದುರು ನಡೆಯುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿ ಶಾಂತಿ ಕದಡುವ ಮತ್ತು ದಂಗೆ ಹಿಂಸಾಕೃತ್ಯಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಾಗಲೂ ಇದೇ ಪೊಲೀಸರು ತಮ್ಮ ಮೇಲಿನ ದಾಳಿಯನ್ನು ಲೆಕ್ಕಿಸದ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.