ಕರ್ನಾಟಕ

karnataka

By

Published : Dec 14, 2020, 3:09 PM IST

Updated : Dec 14, 2020, 5:28 PM IST

ETV Bharat / state

ನಾಲ್ಕು ದಿನಗಳ ಸಾರಿಗೆ ಮುಷ್ಕರ ಅಂತ್ಯ.. ಬಸ್ ಸಂಚಾರ ಪುನಾರಂಭ, ಪ್ರಯಾಣಿಕರು ನಿರಾಳ

ನಾಲ್ಕು ದಿನಗಳ ಸಾರಿಗೆ ಮುಷ್ಕರಕ್ಕೆ ಅಂತ್ಯ..
ನಾಲ್ಕು ದಿನಗಳ ಸಾರಿಗೆ ಮುಷ್ಕರಕ್ಕೆ ಅಂತ್ಯ..

15:04 December 14

ನಾಲ್ಕು ದಿನಗಳಿಂದ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದ್ದ ಸಾರಿಗೆ ಮುಷ್ಕರ ಅಂತ್ಯಗೊಳಿಸಿದ್ದು, ಬಸ್​ ಸಂಚಾರ ಆರಂಭವಾಗಿದೆ.

ಮುಷ್ಕರ ಅಂತ್ಯದ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯಗೊಂಡಿದೆ. ಎಲ್ಲ ಗೊಂದಲಗಳಿಗೂ ಕೊನೆಗೂ ತೆರೆಬಿದ್ದಿದ್ದು, ನಾಗರಿಕ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇದರಿಂದ ಪ್ರಯಾಣಿಕರು ಸಹ ನಿರಾಳರಾಗಿದ್ದಾರೆ.  

ಮುಷ್ಕರ ಹಿಂಪಡೆಯಲು ಷರತ್ತು ವಿಧಿಸಿದ್ದ ನೌಕರರು: ಸಾರಿಗೆ ನೌಕರರ ಮುಷ್ಕರದ ನಾಲ್ಕನೇ ದಿನವಾದ ಇಂದು ಬೆಳಗ್ಗೆ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಗೊಂಡಿರಲಿಲ್ಲ. ಭದ್ರತೆಯ ದೃಷ್ಟಿಯಿಂದ ಪ್ರತಿಯೊಂದು ಬಸ್​ಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳಿಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಕಡೆಯಿಂದ ಮುಷ್ಕರ ಹಿಂಪಡೆಯುವ ಸೂಚನೆ ಸಿಗುತ್ತಿದ್ದಂತೆ ಬಸ್ಸುಗಳ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದವು. ಆದರೆ ಫ್ರೀಡಂ ಪಾರ್ಕ್​ನಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ಹಿಂಪಡೆಯಲು ಷರತ್ತು ವಿಧಿಸಿದರು. ಸರ್ಕಾರದ ಪರವಾಗಿ ಸಚಿವರು ಲಿಖಿತ ಪತ್ರದ ಮೂಲಕ ಸಾರಿಗೆ ನೌಕರರ 9 ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ಲಿಖಿತ ಭರವಸೆ ಪತ್ರ ಕಳುಹಿಸಿದ ಸಿಎಂ: ಇದಕ್ಕೆ ಸಮ್ಮಿತಿಸಿದ ಸಿಎಂ ಯಡಿಯೂರಪ್ಪ, ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ ಮೂಲಕ ಲಿಖಿತ ಭರವಸೆ ಪತ್ರವನ್ನು ಕಳುಹಿಸಿದರು. ಈ ವೇಳೆ ನಂದೀಶ್​ ರೆಡ್ಡಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ರಾಜೂ ಗೌಡ ಸಾಥ್​ ನೀಡಿದರು. ಸಿಎಂ ಆದೇಶದ ಮೇರೆಗೆ ಫ್ರೀಡಂ ಪಾರ್ಕ್​ಗೆ ತೆರಳಿದ ನಂದೀಶ್​ ರೆಡ್ಡಿ, ಎಸ್.ಆರ್.ವಿಶ್ವನಾಥ್, ಶಾಸಕ ರಾಜುಗೌಡ ಮುಷ್ಕರ ನಿರತರಿಗೆ ಲಿಖಿತ ಭರವಸೆ ಪತ್ರವನ್ನು ಹಸ್ತಾಂತರಿಸಿದರು.  

ಇದನ್ನೂ ಓದಿ:ಕಣ್ಣೀರಿಟ್ಟು ಕೋಡಿಹಳ್ಳಿ ‌ಚಂದ್ರಶೇಖರ್​ ಬಳಿ ಮನವಿ ಮಾಡಿದ ಮಹಿಳಾ ಸಿಬ್ಬಂದಿ 

ಆದರೆ ಪತ್ರದಲ್ಲಿ 6 ನೇ ವೇತನ ಆಯೋಗದ ಬಗ್ಗೆ ಗೊಂದಲವಿದ್ದ ಕಾರಣ ಮತ್ತೆ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಮುಷ್ಕರ ನಿರತರು ಪ್ರತಿಭಟನೆಗೆ ತೆರೆ ಎಳೆಯಲು ಹಿಂದೇಟು ಹಾಕಿದರು. ಇದರಿಂದ ಮತ್ತೆ ಸಂಕಷ್ಟಕ್ಕೀಡಾದ ಸರ್ಕಾರ ನೇರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಜತೆ ಮಾತನಾಡಿ ಬಿಕ್ಕಟ್ಟು ಪರಿಹರಿಸಲು ಮುಂದಾಯಿತು.

ಕೋಡಿಹಳ್ಳಿ ಚಂದ್ರಶೇಖರ್​ಗೆ ಡಿಸಿಎಂ ಲಕ್ಷ್ಮಣ ಸವದಿ ಕರೆ: ​ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ಗೆ ಕರೆ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ, ಇನ್ನು ಮುಂದುವರೆಯೋದು ಬೇಡ, ನಾವು ಗೆದ್ದಂತಲ್ಲ, ನೀವು ಸೋತಂತಲ್ಲ. ಈಗ ಮುಷ್ಕರ ಕೈಬಿಡಿ. ಕೊಟ್ಟ ಭರವಸೆ ಈಡೇರಿಸುವ ಜವಾಬ್ದಾರಿ ನನ್ನದು. ಆರನೇ ವೇತನ ಆಯೋಗದ ಬಗ್ಗೆ ನಿನ್ನೆ ಚರ್ಚೆಯಾಗಿದ್ದು ನಿಜ. ಇಂದು ಪತ್ರದಲ್ಲಿಲ್ಲ ಎಂದು ನೀವು ಗೊಂದಲಕ್ಕೆ ಒಳಗಾಗುವುದು ಬೇಡ. ನಿನ್ನೆ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರ ಜಾರಿಗೆ ತರುವುದು ನನ್ನ ಜವಾಬ್ದಾರಿ ಎಂದು ದೂರವಾಣಿಯಲ್ಲಿ ಭರವಸೆ ನೀಡಿದರು.

ಇದನ್ನೂ ಓದಿ:ಎಲ್ಲ ಬಸ್​ಗಳ ಸಂಚಾರ ಆರಂಭ: ಡಿಸಿ ಆರ್. ವೆಂಕಟೇಶ್ ಕುಮಾರ್​ 

ಸಾರಿಗೆ ನೌಕರರ ಮನವೊಲಿಸಿದ ರೈತ ಮುಖಂಡ: ಸಚಿವ ಸವದಿ ಭರವಸೆ ಹಿನ್ನೆಲೆ ಮುಷ್ಕರ ಹಿಂದಕ್ಕೆ ಪಡೆಯಲು ಮುಂದಾದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಮನವೊಲಿಸುವ ಪ್ರಯತ್ನಕ್ಕಿಳಿದರು. ಸದ್ಯ ಸರ್ಕಾರ ನಮಗೆ ಪೂರಕವಾಗಿ ಸ್ಪಂದಿಸಿದೆ. ಇದರಿಂದ ಪ್ರತಿಭಟನೆ ಮುಂದುವರೆಸುವುದು ಬೇಡ. ಈಗಾಗಲೇ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಮತ್ತೊಂದಷ್ಟು ತೊಂದರೆ ಕೊಟ್ಟು ಬಡಜನರ ಶಾಪಕ್ಕೆ ಗುರಿಯಾಗುವುದು ಬೇಡ. ದಯಮಾಡಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಇದುವರೆಗೂ ಯಾವುದೇ ಸರ್ಕಾರ ಇಷ್ಟೊಂದು ಬೇಡಿಕೆಗಳನ್ನ ಈಡೇರಿಸಿಲ್ಲ. ಆದರೆ ಇಷ್ಟಾದರೂ ಮಾಡಿ ನಮ್ಮ ಮರ್ಯಾದೆ ಉಳಿಸಿದ್ದಾರೆ. ಜನವರಿಯಿಂದ 6 ನೇ ವೇತನ ಆಯೋಗ ಜಾರಿ ಆಗುತ್ತೆ ಎಂದು ಹೇಳಿದ್ದಾರೆ. ಸಚಿವರ ಮೇಲೆ ನನಗೆ ನಂಬಿಕೆ ಇದೆ. ಹಾಗೊಂದು ವೇಳೆ ಜನವರಿಯಿಂದ ಬೇರೆ ಗೇಮ್ ಆಡಿದರೆ, ಮುಂದೆ ನೋಡೋಣ. ನಿಮ್ಮ ಜೊತೆ ಎಂದಿಗೂ ಇರುತ್ತೇನೆ ಎಂದು ಹೇಳಿ ಮುಷ್ಕರ ನಿರತರ ಮನವೊಲಿಸಿದರು.

ಇದನ್ನೂ ಓದಿ:ಸಾರಿಗೆ ನೌಕರರ ಹೋರಾಟದ ಹಿಂದೆ ಯಾವುದೋ ರಾಜಕೀಯ ಪಕ್ಷವಿದೆ: ಶೋಭಾ ಶಂಕೆ 

ಬಳಿಕ ಫ್ರೀಡಂ ಪಾರ್ಕ್​ನಲ್ಲಿ ಮುಷ್ಕರ ನಿರತರ ಮನವೊಲಿಸಲು ಯಶಸ್ವಿಯಾದ ಕೋಡಿಹಳ್ಳಿ ಚಂದ್ರಶೇಖರ್​, ನಾಲ್ಕು ದಿನಗಳಿಂದ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದ್ದ ಸಾರಿಗೆ ಮುಷ್ಕರವನ್ನು ಅಂತ್ಯಗೊಳಿಸಿರುವುದಾಗಿ ತಿಳಿಸಿದರು. ಇದರಿಂದ ಬಸ್​ ಸಂಚಾರ ಆರಂಭವಾಗಿದ್ದು, ಕಳೆದ ಮೂರು ದಿನಗಳಿಂದ ಪರದಾಡಿದ್ದ ಪ್ರಯಾಣಿಕರು ಹಾಗೂ ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ.

Last Updated : Dec 14, 2020, 5:28 PM IST

ABOUT THE AUTHOR

...view details