ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವಿಶೇಷ ಬೇಡಿಕೆಯ ಸಾಧಕ-ಬಾಧಕಗಳು ಮತ್ತು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಾರಿಗೆ ಸಚಿವ/ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನಿಯಮ-330ಎ ರಡಿಯಲ್ಲಿನ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ-1950 ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಇದೇ ಮಾದರಿಯ ಬಹಳಷ್ಟು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುತ್ತವೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಇತರೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತಮ್ಮ ಆಂತರಿಕ ಮೂಲಗಳಿಂದಲೇ ಭರಿಸಬೇಕಿದೆ. ರಾಜ್ಯ ರಸ್ತೆ ಸಾರಿಗೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಿಗಮಗಳ ನೌಕರರ ಕೆಲವು ಒಕ್ಕೂಟಗಳು ಮತ್ತು ಸಂಘಗಳು ಇತ್ತೀಚಿನ ದಿನಗಳಲ್ಲಿ ಒತ್ತಾಯಿಸುತ್ತಿರುವುದು ಹಾಗೂ ಆ ಕುರಿತು ಸರ್ಕಾರ ಮತ್ತು ಆಡಳಿತ ವರ್ಗದ ಮೇಲೆ ಒತ್ತಡ ತರುವ ಸಲುವಾಗಿ ಶಾಂತಿಯುತ ಚಳುವಳಿ/ಸತ್ಯಾಗ್ರಹಗಳನ್ನು ಆಯೋಜಿಸಿರುವುದು ನಿಜ ಎಂದು ಹೇಳಿದ್ದಾರೆ.
ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳ ನೌಕರರುಗಳು ತಮ್ಮ ಬಹುದಿನಗಳ ಬೇಡಿಕೆಯಾದಂತಹ ತಮ್ಮನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪರವರ ನೇತೃತ್ವದಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ನೇತೃತ್ವದಲ್ಲಿ ಈ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಲಿಂಗಾಯಿತ ಪಂಚಮಶಾಲಿ ಪೀಠದ ಜಯಮೃತ್ಯಂಜಯ ಸ್ವಾಮೀಜಿರವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನೌಕರರ ಬೇಡಿಕೆಗೆ ಬೆಂಬಲವನ್ನು ಸೂಚಿಸುತ್ತಾ ನೌಕರರ ಬೇಡಿಕೆಯನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆ ಸರ್ಕಾರದ ಗಮನಕ್ಕೆ ತರುವ ಪ್ರಶ್ನೆಯನ್ನು ಶ್ರೀಕಂಠೇಗೌಡರು ಪ್ರಸ್ತಾಪಿಸಿದ್ದರು.