ಬೆಂಗಳೂರು: ಬಸ್ಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿಗೊಳಿಸುವವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಸಾರಿಗೆ ಸೇವೆಗೆ ಅಡ್ಡಿಪಡಿಸುತ್ತಿರುವ ಮುಷ್ಕರನಿರತ ಸಾರಿಗೆ ನೌಕರರಿಗೆ ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರ ನಿರತ ಸಾರಿಗೆ ನೌಕರರ ವಿಚಾರದಲ್ಲಿ ನಮ್ಮ ಸರ್ಕಾರ ಎಷ್ಟೇ ಸಮಾಧಾನ, ಸೌಹಾರ್ದದ ಕ್ರಮ ಅನುಸರಿಸುತ್ತಿದ್ದರೂ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 60 ಸರ್ಕಾರಿ ಬಸ್ಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಿದ್ದು ತೀರಾ ಖಂಡನೀಯವಾಗಿದೆ. ಕೆಎಸ್ಆರ್ಟಿಸಿಯ 34, ಬಿಎಂಟಿಸಿಯ 3, ಈಶಾನ್ಯ ಸಾರಿಗೆಯ 20 ಮತ್ತು ವಾಯುವ್ಯ ಸಾರಿಗೆಯ 3 ಬಸ್ಗಳು ಸೇರಿದಂತೆ ಒಟ್ಟು 60 ಬಸ್ಗಳು ಪ್ರತಿಭಟನಾಕಾರರ ದುಷ್ಕೃತ್ಯಕ್ಕೆ ಈಡಾಗಿ ಹಾನಿಗೊಂಡಿವೆ. ಇದರಲ್ಲಿ ಕೆಲವೊಂದು ವೋಲ್ವೋದಂತಹ ದುಬಾರಿ ಬಸ್ಗಳು ಸೇರಿವೆ. ಬಸ್ಗಳ ಹಾನಿಗೊಳಿಸಿದ ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಬಸ್ಗಳೆಂದರೆ ಸಾರಿಗೆ ವ್ಯವಸ್ಥೆಯ ಆತ್ಮಗಳಿದ್ದಂತೆ. ಇವುಗಳಿಂದಲೇ ನಮ್ಮ ಲಕ್ಷಾಂತರ ಸಾರಿಗೆ ನೌಕರರ ಬದುಕಿನ ರಥವೂ ಸಾಗುತ್ತದೆ ಎಂಬುದನ್ನು ನಮ್ಮ ನೌಕರರು ಅರ್ಥಮಾಡಿಕೊಳ್ಳಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಬಸ್ಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿಗೊಳಿಸಿದರೆ ನಮ್ಮ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿಕೊಂಡಂತಾಗುತ್ತದೆ. ಇಂತಹವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮುಷ್ಕರದಿಂದಾಗಿ ಬಸ್ಗಳ ಸಂಚಾರ ಸ್ಥಗಿತಗೊಂಡು ಈಗಾಗಲೇ 4 ಸಾರಿಗೆ ನಿಗಮಗಳಿಂದ ಬರಬೇಕಾಗಿದ್ದ ಒಟ್ಟು 152 ಕೋಟಿ ರೂ. ಆದಾಯ ಬರದೆ ನಷ್ಟವಾಗಿದೆ. ಇದರಲ್ಲಿ ಕೆಎಸ್ಆರ್ಟಿಸಿಗೆ 70 ಕೋಟಿ ರೂ, ಬಿಎಂಟಿಸಿಗೆ 20 ಕೋಟಿ ರೂ, ಈಶಾನ್ಯ ಸಾರಿಗೆ ನಿಗಮಕ್ಕೆ 31.5 ಕೋಟಿ ರೂ, ವಾಯುವ್ಯ ಸಾರಿಗೆ ನಿಗಮಕ್ಕೆ 30.5 ಕೋಟಿ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.