ಬೆಂಗಳೂರು: ಸಾರಿಗೆ ಇಲಾಖೆಗೆ 2019-20 ನೇ ಸಾಲಿನಲ್ಲಿ ನಿಗದಿಪಡಿಸಿರುವ 7,100 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ತಲುಪುವ ಉದ್ದೇಶವಿದೆ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: ಕೈಮಗ್ಗದಿಂದ ತಯಾರಿಸಿದ ಶಾಲಾ ಸಮವಸ್ತ್ರಗಳನ್ನು ಖರೀದಿಸಲು ಸರ್ಕಾರ ಚಿಂತನೆ: ಸಚಿವ ಶ್ರೀಮಂತ ಪಾಟೀಲ
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 6,683.51 ಕೋಟಿ ರೂ. ಸಂಗ್ರಹಿಸಲಾಗಿದೆ. ಕೊರೊನಾದಿಂದಾಗಿ ಹೊಸ ವಾಹನ ಖರೀದಿ ಕಡಿಮೆಯಾಗಿದೆ. ರಸ್ತೆ ಸೆಸ್ ಸಂಗ್ರಹ 26 ಕೋಟಿ ರೂ. ಆಗಲಿದ್ದು, ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳ ಪ್ರಸಾರಕ್ಕಾಗಿ ಈ ಸೆಸ್ ಬಳಸಲಾಗುವುದು ಎಂದು ಹೇಳಿದರು.
2019-20ನೇ ಸಾಲಿನಲ್ಲಿ ವಿವಿಧ ಮಾದರಿಯ ವಾಹನಗಳಿಂದ 206.14 ಕೋಟಿ ರೂ.ನೋಂದಣಿ ಶುಲ್ಕ, 3856 ಕೋಟಿ ರೂ. ತೆರಿಗೆಯಿಂದ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ 67 ಜಿಲ್ಲಾ ಕೇಂದ್ರ, ತಾಲ್ಲೂಕು ನಗರ ಕೇಂದ್ರಗಳಲ್ಲಿ ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಮಾತೃಪೂರ್ಣ ಯೋಜನೆ ಸ್ಥಗಿತವಿಲ್ಲ:
ಕೋವಿಡ್ -19ರ ಸಾಂಕ್ರಾಮಿಕ ರೋಗದ ಮಾರ್ಗಸೂಚಿ ಸಡಿಲಿಕೆಯಾದ ನಂತರ ಮಾತೃಪೂರ್ಣ ಫಲಾನುಭವಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಬಿಸಿಯೂಟ ತಯಾರಿಸಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ಶಾಸಕ ಇ.ತುಕಾರಾಂ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಅವರು, ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಒಂದು ಸಂಪೂರ್ಣ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಸ್ಥಗಿತವಿಲ್ಲ.
ಕೋವಿಡ್‍ನಿಂದಾಗಿ ಈ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಬಿಸಿಯೂಟದ ಬದಲಾಗಿ ಅಕ್ಕಿ, ತೊಗರಿಬೇಳೆ, ಕಡ್ಲೆಬೀಜ, ಹೆಸರುಕಾಳು, ಹಾಲಿನಪುಡಿ, ಬೆಲ್ಲ, ಸಕ್ಕರೆ, ಮೊಟ್ಟೆ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮಾತೃವಂದನಾ ಮತ್ತು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಉದ್ದೇಶ ಒಂದೇ ಆಗಿರುವುದರಿಂದ ಮಾತೃಶ್ರೀ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.