ಕರ್ನಾಟಕ

karnataka

ETV Bharat / state

ಜನರ ಆರೋಗ್ಯದ ಜೊತೆ ಚೆಲ್ಲಾಟ ಬೇಡ: ಕಾಂಗ್ರೆಸ್​ಗೆ ಡಿಸಿಎಂ ಸವದಿ ಎಚ್ಚರಿಕೆ

ಪೆಟ್ರೋಲ್-ಡೀಸೆಲ್​ ಬೆಲೆ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ಸೈಕಲ್​ ರ್ಯಾಲಿ ನಡೆಸಿರುವುದನ್ನು ಡಿಸಿಎಂ ಲಕ್ಷ್ಮಣ್​ ಸವದಿ ಖಂಡಿಸಿದ್ದಾರೆ.

Lakshman savadi
Lakshman savadi

By

Published : Jun 29, 2020, 6:32 PM IST

ಬೆಂಗಳೂರು:ಇಡೀ ದೇಶ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಚುನಾವಣಾ ರ್ಯಾಲಿಯ ರೀತಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಗಳೂರಿನಲ್ಲಿ ಸೈಕಲ್ ಜಾಥಾ ನಡೆಸುತ್ತಾ ಸಾವಿರಾರು ಮಂದಿ ತಮ್ಮ ಕಾರ್ಯಕರ್ತರೊಂದಿಗೆ ‘ಕಾನೂನು ಭಂಗ’ ಮಾಡಿರುವುದು ತೀವ್ರ ಖಂಡನೀಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕಾಂಗ್ರೆಸ್ಸಿನ ಈ ರ್ಯಾಲಿ ಸಾರ್ವಜನಿಕರ ಜೀವದೊಂದಿಗೆ ಅವರು ನಡೆಸುತ್ತಿರುವ ಚೆಲ್ಲಾಟವಲ್ಲದೇ ಮತ್ತೇನೂ ಅಲ್ಲ. ಕೊರೊನಾ ತಡೆಗಟ್ಟಲು ನಮ್ಮ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರೆ ಈ ಪಯತ್ನಗಳಿಗೆ ಜವಾಬ್ದಾರಿಯುತ ವಿರೋಧಪಕ್ಷವಾಗಿ ಸಹಕಾರ ನೀಡುವುದನ್ನು ಬಿಟ್ಟು ಅಮಾಯಕರ ಆರೋಗ್ಯಕ್ಕೇ ಸಂಚಕಾರ ಉಂಟುಮಾಡುವಂತಹ ಈ ರೀತಿ ರ್ಯಾಲಿ-ಪ್ರತಿಭಟನೆಗಳ ಗಿಮಿಕ್‍ಗೆ ಕಾಂಗ್ರೆಸ್ ಇಳಿದಿರುವುದು ಆ ಪಕ್ಷ ಹತಾಶೆಯ ಸ್ಥಿತಿಗೆ ತಲುಪಿರುವುದಕ್ಕೆ ದ್ಯೋತಕವಾಗಿದೆ‌ ಎಂದು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಪಕ್ಷಗಳೂ ಭಾಗಿಯಾಗಿ ಜನದಟ್ಟಣೆ ಸೇರುವುದನ್ನು ತಪ್ಪಿಸಲು ಅಲಿಖಿತವಾಗಿ ಒಪ್ಪಂದ ಮಾಡಿಕೊಂಡಿರುವಾಗ ಕಾಂಗ್ರೆಸ್​ ಈ ರೀತಿ ಸಾಂಕ್ರಾಮಿಕ ರೋಗ ಹರಡಲು ಅವಕಾಶವಾಗುವಂತೆ ರ್ಯಾಲಿ ನಡೆಸಿದ್ದು ನಿಜಕ್ಕೂ ಅಕ್ಷಮ್ಯ ಎಂದರು.

ಒಂದು ವೇಳೆ ಕಾಂಗ್ರೆಸ್ ಮುಖಂಡರಿಗೆ ಪ್ರತಿಭಟಿಸಲು ನೈಜ ಕಾರಣವಿದ್ದರೆ ಅವರು ಸಮೂಹ ಮಾಧ್ಯಮಗಳ ಮೂಲಕ ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಬಹುದಿತ್ತು. ಅದನ್ನು ಬಿಟ್ಟು ಪೊಲೀಸ್ ಇಲಾಖೆಯ ಸಮ್ಮತಿಯನ್ನು ಪಡೆಯದೇ ಅಮಾಯಕರ ಜೀವಕ್ಕೆ ಕುತ್ತು ತರುವಂಥ ಕೃತ್ಯಕ್ಕೆ ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು‌ ಡಿಸಿಎಂ ಪ್ರಶ್ನಿಸಿದರು.

ಒಂದು ದಿನ ಇವರೆಲ್ಲಾ ತಮ್ಮ ದುಬಾರಿ ಕಾರುಗಳನ್ನು ಮನೆಯಲ್ಲಿ ಬಿಟ್ಟು ಸೈಕಲ್ ಹತ್ತಿದಾಕ್ಷಣ ಪೆಟ್ರೋಲ್ ದರ ಇಳಿದುಬಿಡುತ್ತದೆಯೇ? ಅಸಲಿಗೆ ಇದು ಕೇವಲ ಬೂಟಾಟಿಕೆಯ ಪ್ರದರ್ಶನವಾಗಿ ಕಾಣುತ್ತದೆ ಅಷ್ಟೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸವದಿ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details