ಬೆಂಗಳೂರು: ಕೋವಿಡ್ 2ನೇ ಅಲೆಯು ನಮ್ಮ ರಾಜ್ಯದಲ್ಲೂ ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ರಾಜ್ಯಪಾಲರ ನೇತೃತ್ವದಲ್ಲಿ ಮತ್ತು ಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿ ಸರ್ವ ಪಕ್ಷಗಳ ಸಭೆ ಏರ್ಪಡಿಸಿದಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ನಿನ್ನೆ ನಡೆದ ಸಭೆಯನ್ನು ಡಿಸಿಎಂ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ.
ಕೋವಿಡ್‍ನಂತಹ ಸಾಂಕ್ರಾಮಿಕ ರೋಗಕ್ಕೆ ಅಂಕುಶ ಹಾಕಲು ಎಲ್ಲರೂ ಸಾಮೂಹಿಕವಾಗಿ ಸಂಘಟಿತರಾಗಿ ಪರಸ್ಪರ ಸಹಕಾರಗಳೊಂದಿಗೆ ಕೈಜೋಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತವಾಗಿದೆ. ಹಾಗಾಗಿ ಸರ್ವಪಕ್ಷಗಳ ಸಭೆಯನ್ನು ರಾಜ್ಯಪಾಲರ ನೇತೃತ್ವದಲ್ಲಿ ಏರ್ಪಡಿಸಿದ ಬಗ್ಗೆ ವಿರೋಧ ಪಕ್ಷಗಳ ಮುಖಂಡರ ಟೀಕೆ ಸರಿಯಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ನಾಡಿನ ಹಿತದೃಷ್ಟಿಯಿಂದ ಸೂಕ್ತ ಮಾರ್ಗದರ್ಶನ ನೀಡುವ ಪರಮೋಚ್ಛ ಅಧಿಕಾರ ರಾಜ್ಯಪಾಲರಿಗೆ ಇದ್ದೇ ಇದೆ. ರಾಜ್ಯಪಾಲ ವಜುಭಾಯಿ ವಾಲಾ ಹಿರಿಯ ಮುತ್ಸದ್ಧಿಗಳಾಗಿದ್ದಾರೆ. ಅಂತವರ ಮಾರ್ಗದರ್ಶನ ಪಡೆಯುವುದರಿಂದ ಪ್ರಸ್ತುತ ಎದುರಾಗಿರುವ ಸಂಕಷ್ಟಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ. ರಾಜ್ಯಪಾಲರೇ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದರೆ ಸಭೆಯ ಮಹತ್ವ ಮತ್ತಷ್ಟು ಹೆಚ್ಚಿದೆ. ಕೋವಿಡ್ ನಿಯಂತ್ರಿಸುವ ಕೇಂದ್ರ ಮತ್ತು ರಾಜ್ಯಗಳ ಪ್ರಯತ್ನದ ನಡುವೆ ಸೂಕ್ತ ಕೊಂಡಿಯಂತೆ ರಾಜ್ಯಪಾಲರು ಕರ್ತವ್ಯ ನಿರ್ವಹಿಸುವುದರಲ್ಲಿ ಯಾವುದೇ ಲೋಪವಿಲ್ಲ. ಇದರಲ್ಲೂ ತಪ್ಪು ಹುಡುಕುವುದನ್ನು ಬಿಟ್ಟು ಸಮಸ್ಯೆ ಪರಿಹರಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡುವಂತಹ ಸಕಾರಾತ್ಮಕ ಸಲಹೆ ಸೂಚನೆಗಳನ್ನು ವಿರೋಧ ಪಕ್ಷಗಳು ನೀಡಿದರೆ ಒಳ್ಳೆಯದು ಎಂದು ಸವದಿ ಅಭಿಪ್ರಾಯಪಟ್ಟರು.
ಸಹಕಾರಕ್ಕೆ ಮನವಿ:
ಕೋವಿಡ್ ಮಿತಿ ಮೀರುತ್ತಿರುವ ಹಿನ್ನೆಲೆ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಮತ್ತು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತೆ ವಹಿಸಲು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಆದ್ದರಿಂದ ರಾತ್ರಿ ಕೊರೊನಾ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್‍ಡೌನ್‍ನಂತಹ ಗಂಭೀರ ಕ್ರಮಗಳನ್ನು ಕೈಗೊಂಡು ಈ ಪಿಡುಗನ್ನು ಮಟ್ಟಹಾಕಲು ಯತ್ನಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕೊಂಚ ಅಡಚಣೆಗಳಾದರೂ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.