ಬೆಂಗಳೂರು: ಮತದಾರರಗೆ ಹಣ ಹಂಚಿದ ಆರೋಪ ಸಂಬಂಧ ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧನಿದ್ದೇನೆ. ಒಬ್ಬನೇ ಒಬ್ಬ ಮತದಾರನಿಗೆ ಹಣ ಹಂಚಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣಾ ಪ್ರಚಾರದ ವೇಳೆ ನನ್ನ ಕಾರು ಚಾಲಕನಿಗೆ ಡೀಸೆಲ್ ಹಾಕಿಸಿಕೊಂಡು ಬರಲು ಹಣ ನೀಡಿದ್ದನ್ನೇ ಚಿತ್ರೀಕರಿಸಿ ಬಿತ್ತರಿಸಲಾಗಿದೆ. ಈ ಸಂಬಂಧ ಯಾವುದೇ ರೀತಿಯ ತನಿಖೆಗೂ ಸಿದ್ಧವಿದ್ದೇನೆ. ಕಾನೂನಿಗೆ ನಾನೂ ಹೊರತಲ್ಲ, ತಪ್ಪು ಮಾಡಿದ್ದರೆ ನನಗೂ ಶಿಕ್ಷೆಯಾಗಲಿ. ಚುನಾವಣೆಗೆ ನಾನು ಸ್ಪರ್ಧಿಸಿದ್ದ ಸಂದರ್ಭದಲ್ಲೇ ಹಣ ಹಂಚುವ ಕೆಲಸ ಮಾಡಿಲ್ಲ. ಅಂತಹದ್ದರಲ್ಲಿ ಬೇರೆಯವರ ಚುನಾವಣೆಗೆ ನಾ ಹಣ ಹಂಚುತ್ತೇನಾ ಎಂದು ಕಾರಜೋಳ ತಮ್ಮ ವಿರುದ್ಧದ ಆರೋಪ ತಳ್ಳಿ ಹಾಕಿದ್ರು.
ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಸಿದ್ದರಾಮಯ್ಯನವರು ಬಳಸಬಾರದ ಕೀಳು ಭಾಷೆ ಬಳಸಿದ್ದಾರೆ. ಅವರ ಹಿರಿತನಕ್ಕೆ ಇದು ಸಲ್ಲದು, ದಯವಿಟ್ಟು ಅಂತಹ ಭಾಷೆ ಬಳಸಬೇಡಿ. ನಿಮ್ಮ ಯೋಗ್ಯತೆ, ಘನತೆಗೆ ಕುತ್ತು ಬರಲಿದೆ. ಹಾಗಾಗಿ ಜನತೆಯ ಕ್ಷಮೆ ಕೇಳಿ ಎಂದು ಕಾರಜೋಳ ಒತ್ತಾಯಿಸಿದರು.
ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ, ಎಂ ಬಿ ಪಾಟೀಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ ಹಾಗೂ ಡಿ ಕೆ ಶಿವಕುಮಾರ್ ಹೀಗೆ ಐದುಗುಂಪುಗಳಿವೆ.ಒಬ್ಬರಿಗೊಬ್ಬರು ಸಾಥ್ ನೀಡುತ್ತಿಲ್ಲ, ಪ್ರಚಾರ ಮಾಡುತ್ತಿಲ್ಲ, ಒಗ್ಗಟ್ಟಾಗಿಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್‌ಗೆ ಟೆನ್ಷನ್ ಶುರುವಾಗಿದೆ. ಡಿಸೆಂಬರ್ 9ರ ನಂತರ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ. ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಕುಂದು ಬರುವ ಭಯ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ಗೆಲ್ಲುವ ತಾಕತ್ತಿಲ್ಲ. ಅವರು ಖಾತೆಯನ್ನೇ ತೆರೆಯಲ್ಲ ಎಂದು ಡಿಸಿಎಂ ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಯಾಕೆ ಕಣ್ಣೀರು ಹಾಕಬೇಕು, ಕಿರಿ ವಯಸ್ಸಿನಲ್ಲೇ ಎರಡು ಬಾರಿ ಸಿಎಂ, ಎಂಪಿ ಆಗಿದ್ದಾರೆ. ಹಾಗಾಗಿ ಕಣ್ಣೀರು ಹಾಕುವ ಅಗತ್ಯವಿಲ್ಲ. ಆನಂದವಾಗಿರಿ ಯಾವುದೇ ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಕಾರಜೋಳ ಸಲಹೆ ನೀಡಿದ್ರು. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮತ್ತೆ ಎರಡು ಪಕ್ಷ ಸೇರಿ ಸರ್ಕಾರ ಮಾಡುವ ಹೇಳಿಕೆ ನೀಡಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲವೆಂದರು.
ಹೊಸಪೇಟೆಯಲ್ಲಿ ಆನಂದ್ ಸಿಂಗ್ ಮಾರಾಟವಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಾಗಾದ್ರೆ ನೀವೂ ಕೂಡ ಹಿಂದೆ ಪಕ್ಷ ಬಿಟ್ಟಾಗ ಮಾರಾಟ ಆಗಿದ್ದಿರಾ? ಯಾರೂ ತುಳಸಿ ಪತ್ರ ತಲೆಮೇಲೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿಲ್ಲ, ಲೈನ್ ಕ್ರಾಸ್ ಮಾಡದೇ ರಾಜಕಾರಣ ಮಾಡಲ್ಲವೆಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು.
ಪಾದರಕ್ಷೆಗೆ ಅನರ್ಹ ಶಾಸಕರ ಹೋಲಿಕೆ ಸಲ್ಲದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಇಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ. ಅನರ್ಹರನ್ನು ಭ್ರಷ್ಟರು, ಅಯೋಗ್ಯರು ಎನ್ನುತ್ತೀರಿ. ಅವರು ಈವರೆಗೆ ನಿಮ್ಮ ಬಳಿ ಇದ್ದರು, ಆಗ ಯೋಗ್ಯರಾಗಿದ್ದರಾ ಎಂದು ಡಿಸಿಎಂ ಪ್ರಶ್ನಿಸಿದರು.