ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಒಂದು ವರ್ಷದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಡಿಸಿಎಂ ಗೋವಿಂದ ಎಂ.ಕಾರಜೋಳ, ಲೋಕೋಪಯೋಗಿ, ಸಮಾಜ ಇಲಾಖೆ ಖಾತೆಯನ್ನು ಒಂದು ವರ್ಷದಿಂದ ನಿಭಾಯಿಸುತ್ತಿದ್ದೆ. ಸಮಾಜ ಕಲ್ಯಾಣ ಖಾತೆ ನನ್ನ ಬಳಿ ಹೆಚ್ಚುವರಿಯಾಗಿದ್ದು, ಈಗ ಖಾತೆಯನ್ನು ಶ್ರೀರಾಮುಲು ಅವರಿಗೆ ವಹಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಶೋಷಿತರು, ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ ಎಂದರು.
ಸಮಾಜ ಕಲ್ಯಾಣ ಖಾತೆಯಿಂದ ಬಡವರಿಗೆ - ಶೋಷಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ: ಡಿಸಿಎಂ ಕಾರಜೋಳ ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಕೈ ತಪ್ಪಿದ್ದಕ್ಕೆ ನನಗೆ ಬೇಸರ ಇಲ್ಲ. ನಮ್ಮ ಸಹೋದರ ಶ್ರೀರಾಮುಲು ಅವರಿಗೆ ಕೊಟ್ಟಿದ್ದಾರೆ. ನಾನು ಖುಷಿಯಾಗೇ ಅವರಿಗೆ ಖಾತೆ ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದರು. 2019-20 ಸಾಲಿನಲ್ಲಿ 27, 558.60 ಕೋಟಿ ರೂ. ಎಸ್ಸಿಎಸ್ಪಿ, ಟಿಎಸ್ಪಿ ಹಣ ಬಂದಿತ್ತು. ಅದರಲ್ಲಿ ಶೇ. 92 ರಷ್ಟು ಹಣವನ್ನ ಖರ್ಚು ಮಾಡಿದ್ದೇವೆ. ವಿವಿಧ ಕಾರ್ಯಕ್ರಮಗಳಿಗೆ ಮಾರ್ಚ್ ಅಂತ್ಯಕ್ಕೆ 25,387.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣಕ್ಕೆ 18,228 ಕೋಟಿ ರೂ., ಪರಿಶಿಷ್ಟ ಪಂಗಡದ ಜನರಿಗೆ 7,159 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಇದೇ ಯೋಜನೆಯಡಿ 2020-21 ನೇ ಸಾಲಿನಲ್ಲಿ 27,690 ಕೋಟಿ ರೂ. ಹಣ ಹಂಚಿಕೆಯಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 5,603 ಕೋಟಿ ರೂ. ಹಣ ವೆಚ್ಚ ಮಾಡಲಾಗಿದೆ. ಕೊರೊನಾ ಕಾರಣದಿಂದ ಈ ವರ್ಷ ಹೆಚ್ಚು ಕೆಲಸಗಳು ಆಗಿಲ್ಲ. ವಿದ್ಯಾರ್ಥಿನಿಲಯಗಳ ಕಟ್ಟಡಕ್ಕೆ 188 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ 128 ಕೋಟಿ ರೂ. ವೆಚ್ಚ ಮಾಡಿದ್ದೇವೆ. 129 ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಡಿಸಿಎಂ ತಿಳಿಸಿದರು.
ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ಇದುವರೆಗೆ 4,231 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ 4139.59 ಕೋಟಿ ರೂ. ಗಳನ್ನು (ಶೇ.98) ವೆಚ್ಚ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಒಟ್ಟು ಹಂಚಿಕೆ 3821.55 ಕೋಟಿ ರೂ., ವೆಚ್ಚ 722.20 ಕೋಟಿ ರೂ. ಅಂದರೆ, ಶೇ. 18ರ ಸಾಧನೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿಲಯ ಪ್ರವೇಶ: 2019 - 20ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 1,69,374 ಪರಿಶಿಷ್ಟ ಜಾತಿ ಮತ್ತು 36,548 ಪರಿಶಿಷ್ಟ ಪಂಗಡಗಳ ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
ವಿದ್ಯಾರ್ಥಿವೇತನ:ಮೆಟ್ರಿಕ್ ಪೂರ್ವ 9.11 ಲಕ್ಷ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ134.06 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ 3.99 ಲಕ್ಷ ವಿದ್ಯಾರ್ಥಿಗಳಿಗೆ 51.97 ಕೋಟಿ ರೂ. ವಿದ್ಯಾರ್ಥಿ ವೇತನವನ್ನು (ಡೇ ಸ್ಕಾಲರ್ ಶಿಪ್) ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದುವರೆಗೆ ಪರಿಶಿಷ್ಟ ಜಾತಿಯ 2,16,469 ವಿದ್ಯಾರ್ಥಿಗಳಿಗೆ 163.71 ಕೊಟಿ ರೂ. ಹಾಗೂ ಪರಿಶಿಷ್ಟ ಪಂಗಡದ 1,07,856 ವಿದ್ಯಾರ್ಥಿಗಳಿಗೆ ರೂ.41.00 ಕೋಟಿ ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಸ್ಟೇಟ್ ಸ್ಕಾಲರ್ ಶಿಪ್ ಜಮೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಕಳೆದ ಒಂದು ವರ್ಷಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊತ್ತು ಸಾಮಾಜಿಕ ನ್ಯಾಯ, ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದೇನೆ ಎಂದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 660 ಶಿಕ್ಷಕರ ನೇಮಕ ಮಾಡಲಾಗಿದೆ. ಹಾಗೆಯೇ 993 ಬೋಧಕೇತರ ಸಿಬ್ಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ನೀಡಲಾಗುತ್ತಿದ್ದು, ಇದುವರೆಗೂ 3,200 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿಗೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಪ್ರಬುದ್ಧ ಯೋಜನೆಯಡಿ 88 ವಿದ್ಯಾರ್ಥಿಗಳಿಗೆ ಹೊರ ದೇಶದಲ್ಲಿ ಓದಲು ಅವಕಾಶ ಮಾಡಿಕೊಟ್ಟು ಇದಕ್ಕಾಗಿ 22 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂತರ್ಜಾತಿ ವಿವಾಹ ಪ್ರೋತ್ಸಾಹಕ್ಕೆ 89 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಾಲೋನಿಗಳ ಅಭಿವೃದ್ಧಿಗೆ 202 ಕೋಟಿ ರೂ., ಅರಣ್ಯ ಭಾಗದ ಜನರ ಪೌಷ್ಠಿಕ ಆಹಾರಕ್ಕಾಗಿ 43 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 8,270 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಇದಕ್ಕಾಗಿ 216 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಭೂಮಿ ಖರೀದಿ : ಭೂ ಒಡೆತನದಡಿ 3,228 ಎಕರೆ ಜಮೀನು ಖರೀದಿಸಲಾಗಿದೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಡಿ ಅಗತ್ಯ ಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೇ ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದಡಿ 69 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ವರ್ಷದಿಂದ ಹಲವು ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ ಎಂದು ಕಾರಜೋಳ ಮಾಹಿತಿ ಒದಗಿಸಿದರು.