ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಕಾರಜೋಳ - ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡದಿರುವ ಬಗ್ಗೆ ಡಿಸಿಎಂ ಕಾರಜೋಳ ಸ್ಪಷ್ಟನೆ

ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದಿರುವ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದೀರ್ಘ ವಿವರಣೆಯೊಂದಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

DCM Govinda Karajola Clarified of not visiting neighboring area
ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ : ಡಿಸಿಎಂ ಕಾರಜೋಳ

By

Published : Oct 18, 2020, 7:46 PM IST

ಬೆಂಗಳೂರು: ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡದಿರಬಹುದು. ಆದರೆ ಜವಾಬ್ದಾರಿಯಿಂದ ಉಪಮುಖ್ಯಮಂತ್ರಿಯಾಗಿ, ಜಿಲ್ಲಾಉಸ್ತುವಾರಿ ಸಚಿವನಾಗಿ ನೊಂದವರ ಪರಿಹಾರಕ್ಕೆ ಶ್ರಮಿಸುತ್ತಿದ್ದೇನೆ, ಜಿಲ್ಲಾಡಳಿತಕ್ಕೆ ಅಗತ್ಯ ನಿರ್ದೇಶನ ನೀಡುತ್ತಿದ್ದೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟೀಕರಣ ನೀಡಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ-ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದರ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು ಎಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡದ ನಿಲುವನ್ನು ಕಾರಜೋಳ ಸಮರ್ಥಿಸಿಕೊಂಡಿದ್ದಾರೆ.

ನನ್ನ ಪುತ್ರ ಡಾ. ಗೋಪಾಲ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮ ಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ ಗೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ. ಇಂತಹ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂತ್ರಸ್ತರ ಪರಿಹಾರಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನು ಜಿಲ್ಲಾಡಳಿತಕ್ಕೆ ಖಚಿತವಾಗಿ ನಿರ್ದೇಶಿಸಿದ್ದೇನೆ. ಅದರ ಸತತ ಉಸ್ತುವಾರಿಯಲ್ಲಿ ಇದ್ದೇನೆ. ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿಲ್ಲದಿರಬಹುದು. ಆದರೆ ಜವಾಬ್ದಾರಿಯಿಂದ ಉಪಮುಖ್ಯಮಂತ್ರಿಯಾಗಿ, ಜಿಲ್ಲಾಉಸ್ತುವಾರಿ ಸಚಿವರಾಗಿ ನೊಂದವರ ಪರಿಹಾರಕ್ಕೆ ಶ್ರಮಿಸುತ್ತಿದ್ದೇನೆ. ಮಾತುಗಳಿಂದ ಇಲ್ಲವೇ ಘೋಷಣೆಗಳಿಂದ ಅಥವಾ ಟೀಕೆ ಟಿಪ್ಪಣಿಗಳಿಂದ ಸಂತ್ರಸ್ತರ ಪರಿಹಾರ ಕಾರ್ಯ ಆಗಲಾರದು. ಅದಕ್ಕೆ ಬೇಕಾದುದು ಸರ್ಕಾರದ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳಿಗೆ ಮಾರುಹೋಗದೇ ಸರ್ಕಾರದ ವಿಶ್ವಾಸಾರ್ಹ ಕ್ರಮಗಳನ್ನು ಗಮನಿಸಬೇಕೆಂದು ಮನವಿ ಮಾಡಿದ್ದಾರೆ.

ಯುಗಾದಿಯಿಂದ ಆರಂಭವಾದ ಈ ಕೊರೊನಾ ವೈರಾಣು ನಿವಾರಣೆ ಹಾಗೂ ನೊಂದವರ ಕಲ್ಯಾಣಕ್ಕೆ ನಾನು ಕೈಗೊಂಡಿರುವ ಕಾರ್ಯ, ಪರಿಹಾರಕ್ರಮಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಬೇಕು. 2009 ರ ಅತಿವೃಷ್ಟಿ ಸಂದರ್ಭದ ಪರಿಸ್ಥಿತಿಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣಾ ಕಾರ್ಯ, ಪರಿಹಾರಕಾರ್ಯಗಳನ್ನು ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ.

ವರ್ತಮಾನದ ಒಂದು ಘಟನೆಯಿಂದಷ್ಟೇ ವ್ಯಕ್ತಿಯನ್ನು ಅಳೆಯಲು ಹೋಗಬಾರದು. ಹಿಂದಿನ ವಿದ್ಯಮಾನಗಳು ಈಗಿನ ಸ್ಥಿತಿಯನ್ನು ಗುರುತಿಸಲು ಯಾವತ್ತಿಗೂ ನಿರ್ಣಾಯಕ ಎಂಬುದು ನನ್ನ ತಿಳುವಳಿಕೆ. ಈ ಸಂದರ್ಭದಲ್ಲಿ ಪರಂಪರೆಯ ಬೆಳಕಿನಲ್ಲಿ ವರ್ತಮಾನದ ಕತ್ತಲನ್ನು ಓಡಿಸಿ ಭವಿಷ್ಯಕ್ಕೆ ಬೆಳಕನ್ನು ತರುವ ಕಡೆ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಮುನ್ನಡೆಯುವುದು ನಾನು ತೊಟ್ಟಿರುವ ಧೀಕ್ಷೆ. ಇದಕ್ಕೆ ಇಡೀ ಕರ್ನಾಟಕದ ಜನತೆಯ ಆರೈಕೆ, ಹಾರೈಕೆ ಅಗತ್ಯ. ಸೇವೆ ನನ್ನದು - ಸ್ವೀಕಾರ ನಿಮ್ಮದು ಎಂದು ಸುದೀರ್ಘ ವಿವರಣೆಯೊಂದಿಗೆ ಡಿಸಿಎಂ ಗೋವಿಂದ್​ ಕಾರಜೋಳ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details