ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ಗೆ ಡಿಸಿಎಂ ಕಾರಜೋಳ ಚಾಲನೆ - ಡಿಸಿಎಂ ಗೋವಿಂದ ಎಂ ಕಾರಜೋಳ
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ಗೆ ಡಿಸಿಎಂ ಕಾರಜೋಳರಿಂದ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳು ಈ ವರ್ಷ ಉತ್ತಮ ರೀತಿಯ ಪೂರ್ವಸಿದ್ಧತೆ ಕೈಗೊಳ್ಳಬೇಕು. ಈ ವರ್ಷ ಶೇ. 100 ರಷ್ಟು ಫಲಿತಾಂಶ ದೊರಕುವಂತೆ ಶ್ರಮ ವಹಿಸಬೇಕು. ಕಳೆದ 2 ತಿಂಗಳಿಂದ ಮನೆಯಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿರುವುದರಿಂದ ಹೆಚ್ಚು ಕಾಳಜಿ ವಹಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಸಲಹೆ ನೀಡಿದ್ದಾರೆ.
ಬೆಂಗಳೂರು:ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳ 20,928 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನೂತನವಾಗಿ ಪ್ರಾರಂಭಿಸಿರುವ ಆನ್‍ಲೈನ್ ತರಗತಿಗೆ ಡಿಸಿಎಂ ಗೋವಿಂದ ಎಂ ಕಾರಜೋಳ ಚಾಲನೆ ನೀಡಿದ್ರು.
ನಂತರ ಮಾತನಾಡಿದ ಅವರು, ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮೂಲಕ ಆನ್‍ಲೈನ್ ತರಗತಿಗಳನ್ನು ನೇರವಾಗಿ ಪ್ರಸಾರ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಮೊಬೈಲ್, ಟ್ಯಾಬ್, ಕಂಪ್ಯೂಟರ್ಗಳಲ್ಲಿ ವೀಕ್ಷಿಸಿ, ಸಮಸ್ಯೆ ಇದ್ದರೆ ಶಿಕ್ಷಕರೊಂದಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದಾಗಿದೆ. ಶಿಕ್ಷಕರು ಮಾಡಿದ ಉಪನ್ಯಾಸಗಳು ರೆಕಾರ್ಡ್ ಆಗಿರುವ ಕಾರಣ ವಿದ್ಯಾರ್ಥಿಗಳು ತಮಗೆ ಅಗತ್ಯವೆನಿಸಿದಾಗಲೆಲ್ಲಾ ಕೇಳಿ ಪರಿಹರಿಸಿಕೊಳ್ಳಬಹುದು. ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹಾರೈಸಿದರು.