ಬೆಂಗಳೂರು :ಲೋಕೋಪಯೋಗಿ ಇಲಾಖೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಶೀಘ್ರವಾಗಿ ವಿಭಜಿಸುವಂತೆ ಲೋಕೋಪಯೋಗಿ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದರು.
ವಿಧಾನಸೌಧದಲ್ಲಿ ಇಂದು ಇಲಾಖೆಗಳನ್ನು ವಿಭಜಿಸುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗಳನ್ನು ವಿಭಜಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಇಂಜಿನಿಯರ್‌ಗಳು ಹಾಗೂ ಇಂಜಿನಿಯರಿಂಗ್ ಸಂಘದ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಮೂರು ಇಲಾಖೆಗಳಿಂದ ಮಾಹಿತಿ ಕ್ರೂಢೀಕರಿಸಲಾಗಿದೆ. ಸಾಧಕ- ಬಾಧಕಗಳ ಕುರಿತು ಚರ್ಚಿಸಿ ವಿಭಜಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದು ಉತ್ತಮ ನಿರ್ಧಾರವಾಗಿದೆ ಎಂದರು.
ನೀರಾವರಿ ಸಚಿವರು ಹಾಗೂ ಗ್ರಾಮೀಣಾವೃದ್ಧಿ ಸಚಿವರ ಇಲಾಖೆಗಳ ವಿಭಜನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ನೀರಾವರಿ ಸಚಿವರಿಗೆ ಡಿಸಿಎಂ ಧನ್ಯವಾದ ವ್ಯಕ್ತಪಡಿಸಿದರು. ಶೀಘ್ರವಾಗಿ ವಿಭಜನೆಯ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ ಎಸ್ ಈಶ್ವರಪ್ಪ, ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ ಗುರುಪ್ರಸಾದ್, ನೀರಾವರಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್, ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.