ಬೆಂಗಳೂರು: " ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ" ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿ, "ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ?. ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಏನು ಗೊತ್ತಿದೆ" ಎಂದು ಪ್ರಶ್ನಿಸಿದ್ದಾರೆ.
"ಕುಮಾರಸ್ವಾಮಿ ಅವರಿಗೆ ಬಡ ಜನತೆಯ ನೋವು ಗೊತ್ತಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಅವರೂ ಒಬ್ಬ ನಾಯಕರು, ಆರೋಪ ಮಾಡಲಿ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಒಳ್ಳೆಯದಾಗಬೇಕಿತ್ತೊ ಅವರಿಗೆ ಅದು ತಲುಪಿ, ಸಂತೋಷವಾಗಿದ್ದಾರೆ. ಕುಮಾರಸ್ವಾಮಿ ಅವರೇನು ಫಲಾನುಭವಿಗಳೂ ಅಲ್ಲ, ಅದರ ಬಗ್ಗೆ ಅವರಿಗೆ ಚಿಂತನೆಯೇ ಇಲ್ಲ. ಪಾಪ ಅವರಿಗೆ ಅವರ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಆಗಲೇ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿದೆಯೋ, ಇಲ್ಲವೊ ಎನ್ನುವುದನ್ನು ಅವರು ಮತದಾರರ ಬಳಿ ಕೇಳಿ ತಿಳಿದುಕೊಳ್ಳಬೇಕು" ಎಂದು ತಿರುಗೇಟು ನೀಡಿದ್ದಾರೆ.
"ಚನ್ನಪಟ್ಟಣದ 25ಕ್ಕೂ ಹೆಚ್ಚು ಮತದಾರರ ಬಳಿ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮತದಾರರ ಬಳಿ ಹೋಗಿ ಕೇಳಲಿ. ಉಚಿತ ವಿದ್ಯುತ್, ಶಕ್ತಿ, ಅನ್ನ ಭಾಗ್ಯ, ಗೃಹಲಕ್ಷ್ಮಿ ಯೋಜನೆಗಳು ಅವರಿಗೆ ತಲುಪಿದೆಯೆ?, ಇಲ್ಲವೇ? ಎಂದು ಪರೀಕ್ಷೆ ಮಾಡಲಿ. ಒಂದಷ್ಟು ತಾಂತ್ರಿಕ ದೋಷ ಹಾಗೂ ಇತರೇ ಕಾರಣಗಳಿಂದ ಶೇ5 ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಈಗ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿ ತಲುಪಿಸಲಾಗುತ್ತಿದೆ" ಎಂದು ತಿಳಿಸಿದರು.