ಬೆಂಗಳೂರು: "ಜ.14ರ ಬಳಿಕ ನಿಗಮ ಮಂಡಳಿಗಳ ನೇಮಕಾತಿಯ ಮೊದಲ ಪಟ್ಟಿ ಪ್ರಕಟಿಸಲಾಗುವುದು" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಇಂದಿರಾಭವನದಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು," ಜ.14ರ ಬಳಿಕ ಪಟ್ಟಿ ಪ್ರಕಟವಾಗಲಿದೆ. ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರುಗಳಿಗೆ ಎರಡು ವರ್ಷಗಳ ಕಾಲಾವಧಿ ನೀಡಲಾಗುತ್ತದೆ. ಹೆಚ್ಚಿನ ಕಾರ್ಯಕರ್ತರಿಗೆ ಅವಕಾಶ ನೀಡಲು ಈ ನಿರ್ಧಾರ ಮಾಡಿದ್ದೇವೆ" ಎಂದು ತಿಳಿಸಿದರು.
"ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶ, ನಮ್ಮ ಪಕ್ಷ ಕರ್ನಾಟಕದ ಮೇಲೆ ಬಹಳ ವಿಶ್ವಾಸ ಇಟ್ಟುಕೊಂಡಿದ್ದು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಜನರಿಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನಮ್ಮ ಕಾರ್ಯಕರ್ತರು ಮತ್ತೆ ಜನರ ಬಳಿಗೆ ಹೋಗಲು ಆತ್ಮವಿಶ್ವಾಸ ತುಂಬಿದ್ದೇವೆ. ಈ ಹಿಂದೆ ದೇಶದಲ್ಲಿ ಯಾವ ಸರ್ಕಾರವೂ ಕೊಟ್ಟ ಮಾತನ್ನು ಏಳೇ ತಿಂಗಳಲ್ಲಿ ಪೂರ್ಣಗೊಳಿಸಿರಲಿಲ್ಲ. ನಾಲ್ಕು ಗ್ಯಾರಂಟಿ ಜನರನ್ನು ತಲುಪಿದ್ದು, ಐದನೇ ಗ್ಯಾರಂಟಿ ಯುವನಿಧಿಗೆ ಇದೇ 12 ರಂದು ವಿವೇಕಾನಂದರ ಜಯಂತಿ ದಿನ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದೇವೆ" ಎಂದರು.
ಜ.21 ರಾಜ್ಯ ಕಾರ್ಯಕರ್ತರ ಸಮಾವೇಶ: "ಇದೇ 21ರಂದು ರಾಜ್ಯದ ಕಾರ್ಯಕರ್ತರ ಸಮಾವೇಶ ನಡೆಸುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಶಾಸಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು, ಸೋತವರು, ಬೂತ್ ಮಟ್ಟದ ಪ್ರತಿನಿಧಿಗಳನ್ನು ಸೇರಿಸಿ ಈ ಸಮಾವೇಶ ಮಾಡಲು ತಿಳಿಸಿದ್ದು, ಕಾರ್ಯಕ್ರಮ ಸ್ಥಳದ ಬಗ್ಗೆ ಎರಡು ದಿನಗಳಲ್ಲಿ ತಿಳಿಸುತ್ತೇವೆ" ಎಂದು ಹೇಳಿದರು.