ಕರ್ನಾಟಕ

karnataka

ETV Bharat / state

ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಡಿಕೆಶಿ ಆಗ್ರಹ

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆಯ ನಂತರ ಸಂಕಷ್ಟ ಸೂತ್ರದ ರೂಪುರೇಷೆ ಹೇಗಿರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

dcm-dk-sivakumar-reaction-on-cauvery-issue
ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಆಗ್ರಹ: ಡಿಸಿಎಂ ಡಿ ಕೆ ಶಿವಕುಮಾರ್

By ETV Bharat Karnataka Team

Published : Sep 29, 2023, 3:54 PM IST

Updated : Sep 29, 2023, 4:13 PM IST

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ನೀರು ಹರಿಸುವ ಹೊಸ ಸೂತ್ರ ರೂಪಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಆಗ್ರಹ ಮಾಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆಯ ನಂತರ ಸಂಕಷ್ಟ ಸೂತ್ರದ ರೂಪುರೇಷೆ ಹೇಗಿರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಕಷ್ಟ ಸೂತ್ರ ಆಗ್ರಹ ಮಾಡುವ ಮೊದಲು ನಮಗೆ ಅದರ ಬಗ್ಗೆ ಸ್ಪಷ್ಟತೆ ಇರಬೇಕು. ಅದಕ್ಕೆ ನಾವು ಮೊದಲು ಒಂದು ಸೂತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿ ಇಂದು ಸಂಜೆ ಸಭೆ ಕರೆಯಲಾಗಿದೆ. ರಾಜ್ಯದ ಹಿತವನ್ನು ಸುಪ್ರೀಂಕೋರ್ಟಿನಲ್ಲಿ ಕಾಪಾಡಿದಂತಹ ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ನೀರಾವರಿ ತಜ್ಞರ ಜೊತೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಚರ್ಚೆ ನಡೆಸುತ್ತೇವೆ ಎಂದರು.

ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಆನ್‌ಲೈನ್ ಮೂಲಕ ಭಾಗವಹಿಸದೇ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೀರಿನ ಬಿಡುಗಡೆ ಬಗ್ಗೆ ವಿರೋಧ ಪಕ್ಷದವರು, ಬೇರೆಯವರು ಏನೇನೋ ಹೇಳುತ್ತಾರೆ. ನನಗೆ ಅವರಿಗಿಂತ, ಬೇರೆಯವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ಬಾಯಿಗೆ ಬಂದಂತೆ ಮಾತನಾಡುವ ಜಾಯಮಾನ ನನ್ನದಲ್ಲ, ನಾನು ಸಹ ರೈತ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಂದ್ ನಿರ್ವಹಣೆ:ಕರ್ನಾಟಕ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ. ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದೆವು, ಅದರಂತೆ ಬಂದ್ ವೇಳೆಯಲ್ಲಿ ಸಾವರ್ಜನಿಕರಿಗೆ ತೊಂದರೆಯಾಗದಂತೆ ರಕ್ಷಣೆ ಕೊಟ್ಟಿದ್ದೇವೆ. ಸಾರಿಗೆ, ದಿನನಿತ್ಯ ಬಳಕೆಯ ವಸ್ತುಗಳ ಲಭ್ಯತೆಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾವೇರಿ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ - ಲೆಹರ್ ಸಿಂಗ್: ಕಾವೇರಿ ವಿಚಾರವಾಗಿ ತಮಿಳುನಾಡು ಸರ್ಕಾರವನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಚೆನ್ನೈನಿಂದ ಮರಳಿದ್ದರು. ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು 48 ಗಂಟೆಗಳ ಕಾಲ ಕಾದಿದ್ದರೂ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.‌ ಬೆಂಗಳೂರಿನಲ್ಲಿ ಉಂಟಾಗಿರುವ ಕುಡಿಯುವ ನೀರಿನ ಬಿಕ್ಕಟ್ಟು, ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಮನವರಿಕೆ ಮಾಡಲು ಬಯಸಿದ್ದಾಗಿ ಹೇಳಿರುವ ಲೆಹರ್ ಸಿಂಗ್ ಅವರು, ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ನೋಡುವ ಬದಲು, ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ:ಕಾವೇರಿ ವಿವಾದ: ಮಂಡ್ಯದಿಂದ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡಿದ ಶ್ವಾನ!

Last Updated : Sep 29, 2023, 4:13 PM IST

ABOUT THE AUTHOR

...view details