ಕರ್ನಾಟಕ

karnataka

ETV Bharat / state

ನಿರ್ಮಲಾ ಸೀತಾರಾಮನ್ ಭೇಟಿಯಾದ ಡಿಕೆಶಿ; ಬೆಂಗಳೂರು ಟನೆಲ್ ಯೋಜನೆಗೆ ನೆರವು ನೀಡಲು ಮನವಿ

ರಾಜ್ಯದ ಪ್ರಮುಖ ಮೂರು ಯೋಜನೆಗಳು ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಿರ್ಮಲಾ ಸೀತಾರಾಮನ್ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್​
ನಿರ್ಮಲಾ ಸೀತಾರಾಮನ್ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್​

By ETV Bharat Karnataka Team

Published : Dec 20, 2023, 5:34 PM IST

ದೆಹಲಿ/ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬೆಂಗಳೂರು ಸಂಬಂಧಿತ ಮೂರು ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿದ್ದು, ಈ ಸಂಬಂಧ ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಅನುಷ್ಠಾನದಲ್ಲಿ ಹಣಕಾಸು, ಸಂಪನ್ಮೂಲ ಕ್ರೋಢೀಕರಣ, ಸಮನ್ವಯತೆ ಸೇರಿ ಹಲವು ತೊಡಕುಗಳಿವೆ. ಹೀಗಾಗಿ ಕೇಂದ್ರದ ನೆರವು ಅತ್ಯಗತ್ಯ ಎಂದು ಪತ್ರದಲ್ಲಿ ಕೋರಿದ್ದಾರೆ.

ನಗರ ಸುರಂಗ ಮಾರ್ಗ:ವಿಶೇಷವಾಗಿ ಉದ್ದೇಶಿತ ಬೆಂಗಳೂರು ಸುರಂಗ ಮಾರ್ಗಕ್ಕೆ ಅನುದಾನ ನೀಡುವಂತೆ ಡಿಕೆಶಿ ಕೋರಿದ್ದಾರೆ. ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ 60 ಕಿ.ಮೀ ಸುರಂಗ ಮಾರ್ಗ ಮಾಡಲು ಯೋಜಿಸಲಾಗಿದೆ. ಪ್ರಮುಖ ಹೊರ ವರ್ತುಲ ರಸ್ತೆ ಸಂಪರ್ಕಿಸುವ ಹಾಗೂ ಮೇಲ್ಮೈ ರಸ್ತೆ ಮಾರ್ಗಕ್ಕೆ ಪರ್ಯಾಯವಾಗಿ ಟನೆಲ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟು 30,000 ಕೋಟಿ ರೂ ವೆಚ್ಚದ ಟನೆಲ್ ಯೋಜನೆಗೆ ಪ್ರತಿ ಕಿ.ಮೀಗೆ 500 ಕೋಟಿ ರೂ. ವೆಚ್ಚವಾಗಲಿದೆ. ರಾಷ್ಟ್ರೀಯ ಹೆದ್ದಾರಿಗೂ ಈ ಟನೆಲ್ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಹೀಗಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಆರ್ಥಿಕ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಮೆಟ್ರೋ ಕಾರಿಡಾರ್ ವಿಸ್ತರಣೆ:ಪ್ರಸಕ್ತ ಮೆಟ್ರೋ ರೈಲು ಮಾರ್ಗಗಳಿಗೆ ಐದು ಕಾರಿಡಾರುಗಳನ್ನು ವಿಸ್ತರಣೆ ಮಾಡಲು ಗುರುತಿಸಲಾಗಿದೆ. ಸುಮಾರು 129 ಕಿ.ಮೀ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಉದ್ದೇಶಿತ ವಿಸ್ತರಿತ ಮೆಟ್ರೋ ಕಾರಿಡಾರ್ ಹೊರ ವರ್ತುಲ ರಸ್ತೆ ಹಾಗೂ ಬೆಂಗಳೂರು ಉಪನಗರವನ್ನು ಸಂಪರ್ಕಿಸುತ್ತದೆ. ಈ ಐದು ಮೆಟ್ರೋ ಕಾರಿಡಾರುಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡುವಂತೆ ಕೋರಿದ್ದಾರೆ.

ನೆರೆ ನಿಯಂತ್ರಕ ಕ್ರಮಗಳಿಗೆ ಮಂಜೂರಾತಿ:ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಸುಮಾರು 3,000 ಕೋಟಿ ರೂ. ನೆರವಿಗಾಗಿ ವಿಶ್ವ ಬ್ಯಾಂಕ್​ಗೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಗೆ ಸಲ್ಲಿಸಲಾಗಿದೆ. ಹೀಗಾಗಿ ಮಂಜೂರಾತಿ ನೀಡುವಂತೆ ಒತ್ತಾಯಿಸಿದ್ದಾರೆ.

ಮೇಕೆದಾಟು ಯೋಜನೆ:ಮೇಕೆದಾಟು ಯೋಜನೆಗೆ ಅಗತ್ಯವಾದ ಎಲ್ಲಾ ಮಂಜೂರಾತಿ ನೀಡುವಂತೆ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. 2019ರಲ್ಲಿ ಯೋಜನೆ ಸಂಬಂಧ ಡಿಪಿಆರ್​ ಅನ್ನು ಕೇಂದ್ರ ಜಲ ಆಯಕ್ತಾಲಯಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಅಗತ್ಯ ಮಂಜೂರಾತಿಗಳನ್ನು ನೀಡುವಂತೆ ಜಲ ಶಕ್ತಿ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಕೃಷ್ಣ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ:ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಜೊತೆಗೆ ಕೃಷ್ಣ ಜಲ ಬಿಕ್ಕಟ್ಟು ನ್ಯಾಯಾಧಿಕರಣ-II ತೀರ್ಪು ಸಂಬಂಧ ಅಧಿಸೂಚನೆ ಹೋರಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದ್ದು, ಅಗತ್ಯ ಅಫಿಡವಿಟ್ ಸಲ್ಲಿಸಲು ಜಲಶಕ್ತಿ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.

ಭದ್ರ ಮೇಲ್ದಂಡೆ ಯೋಜನೆಗೆ ನೆರವು:ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆಯೂ ಜಲಸಂಪನ್ಮೂಲ ಸಚಿವರಾಗಿರುವ ಡಿಕೆಶಿ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ. 2023-24 ಕೇಂದ್ರ ಬಜೆಟ್​ನಲ್ಲಿ ಯೋಜನೆಗಾಗಿ 5,300 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಸೇರಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಕೇಂದ್ರದ ಆರ್ಥಿಕ ನೆರವು ಲಭ್ಯವಾಗದ ಕಾರಣ ಕಾಮಗಾರಿ ಪ್ರಗತಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿದ 5,300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡಲು ಹಾಗೂ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ನಿಟ್ಟಿನಲ್ಲಿ ಜಲ ಶಕ್ತಿ ಸಚಿವಾಲಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿದ್ದಾರೆ.

ಇದೇ ವೇಳೆ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಸಂಬಂಧ ಶೀಘ್ರ ಕೇಂದ್ರ ಪರಿಸರ, ಅರಣ್ಯ ಇಲಾಖೆಯಿಂದ ಅಗತ್ಯ ಮಂಜೂರಾತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಮತ್ತು ಜಲ ಜೀವನ ಮಿಷನ್ ಯೋಜನೆಯಡಿ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 9,177.32 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಡಿಕೆಶಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅಮಿತ್‌ ಶಾ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಉನ್ನತ ಮಟ್ಟದ ಸಭೆ ನಡೆಸಿ, ಪರಿಹಾರ ಬಿಡುಗಡೆ ಮಾಡಲು ಒತ್ತಾಯ

ABOUT THE AUTHOR

...view details