ಬೆಂಗಳೂರು:ಬಿಡಿಎ ಸಂಸ್ಥೆಗೆ ಕರಪ್ಷನ್ ಕಳಂಕ ಮೆತ್ತುಕೊಂಡಿದೆ ಈ ಹಣೆಪಟ್ಟಿಯಿಂದ ಸಂಸ್ಥೆಯನ್ನು ಹೊರತರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬಿಡಿಎ ಅಧಿಕಾರಿಗಳ ಸಭೆಯಲ್ಲಿಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಯಾವುದೇ ಡಿನೋಟಿಫಿಕೇಷನ್ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೇವಲ ನೋಟಿಫಿಕೇಶನ್ ಹೊರಡಿಸಿದರೆ ಸಾಲದು, ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಬೇಕು. ಸಂಚಾರ ದಟ್ಟಣೆ ಕಡಿಮೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಬೇಕು. ಜಮೀನು ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು
ಸಿಡಿಪಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. 73.40 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಯಾವೆಲ್ಲ ಬದಲಾವಣೆಗಳನ್ನು ತರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಭ್ರಷ್ಟಾಚಾರ ನಿಲ್ಲಬೇಕು. ಇದನ್ನು ನಾವು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಿಸಿದರು. ಬಿಡಿಎನಲ್ಲಿ ದೊಡ್ಡಮಟ್ಟದ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ, ಹೀಗಾಗಿ ಕೆಲಸ ನೀಡುವ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಚರ್ಚೆ ಮಾಡಿದ್ದೇನೆ. ಅವರ ಸಲಹೆಗಳನ್ನು ಸಂಗ್ರಹಿಸಿದ್ದು, ಸಾರ್ವಜನಿಕ ಅಭಿಪ್ರಾಯ ಪಡೆಯುತ್ತೇನೆ. ಇನ್ನು ಗುತ್ತಿಗೆದಾರರ ಸಂಘದ ಜೊತೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಿಗದಿಯಾಗಿದೆ. ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.