ರಾಜಕಾಲುವೆಗಳ ಪರಿಶೀಲನೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ಬೆಂಗಳೂರು:ವರ್ತೂರಿನ ರಾಮಗೊಂಡನಹಳ್ಳಿಯಲ್ಲಿ ಇಂದು ಸಿಟಿ ರೌಂಡ್ಸ್ ಪೂರ್ಣಗೊಳಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಳೆದ ವರ್ಷ ಬೆಂಗಳೂರು ನಗರ ಪಾಲಿಕೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಉಂಟಾಗಿದ್ದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಇಂದಿನ ಸಿಟಿ ರೌಂಡ್ಸ್ ಬಗ್ಗೆ ಮಾಹಿತಿ ನೀಡುತ್ತಾ, ನಗರದ ಸಮಸ್ಯೆಗಳನ್ನು ಅರಿತೆ. ಖಾಸಗಿ ಬಿಲ್ಡರ್ಸ್, ಡೆವಲಪರ್ಸ್ಗಳು ಒತ್ತುವರಿ ಮಾಡಿ ಕಾಲುವೆ ಮುಚ್ಚಿರುವುದನ್ನು ಗಮನಿಸಿದ್ದೇನೆ ಎಂದರು.
ಖಾಸಗಿ ಬಿಲ್ಡರ್ಸ್ಗಳು ಮುಚ್ಚಿರುವ ರಾಜಕಾಲುವೆ ತೆರವುಗೊಳಿಸಲು ಎಷ್ಟೇ ಒತ್ತಡ ಇದ್ದರೂ ನಮಗಿರುವ ಕಾನೂನು ಬಳಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಯಾವುದೇ ಬಿಲ್ಡರ್ಸ್ಗಳು, ಡೆವಲಪರ್ಸ್ಗಳು ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ರಾಜಕಾಲುವೆಗಳ ಪರಿಶೀಲನೆ ಮಾಡಿದ ಡಿಸಿಎಂ ಡಿಕೆಶಿ ಯಾರೇ ಆಗಲಿ, ರಾಜಕಾಲುವೆ ತೆರವಿಗೆ ಸಹಕಾರ ನೀಡಬೇಕು. ನ್ಯಾಯಾಲಯ, ಕಾನೂನು ಹೋರಾಟದ ಮೂಲಕ ಕೆಲವರು ಕಾಮಗಾರಿ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಇಂತಹ ಖಾಸಗಿ ಬಿಲ್ಡರ್ಸ್ಗಳು ತಾವೇ ಅರಿತು ರಾಜಕಾಲುವೆ ತೆರವಿಗೆ ಸಹಕಾರ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಬಳಿ ಬೇರೆ ರೀತಿಯ ಕಾನೂನು ಅವಕಾಶಗಳಿವೆ, ಅವುಗಳನ್ನು ಬಳಸಬೇಕಾಗುತ್ತದೆ ಎಂದು ತಡೆಯೊಡ್ಡುವ ಡೆವಲಪರ್ಸ್ಗಳಿಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಕೆಲವು ಬಿಲ್ಡರ್ಸ್ಗಳ ಕೆಲಸದಿಂದ ಮೇಲ್ಸೇತುವೆ, ರಾಜಕಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ದಿವ್ಯಶ್ರೀ ಅಪಾರ್ಟ್ಮೇಂಟ್ ಇರಲಿ, ಡಿ.ಕೆ. ಶಿವಕುಮಾರ್ ಅಪಾರ್ಟ್ಮೆಂಟ್ ಇರಲಿ, ರಾಜಕಾಲುವೆ, ರಸ್ತೆಗಳು ಎಷ್ಟು ಅಗಲ ಇರಬೇಕೋ ಅಷ್ಟು ಅಗಲ ಇರಲೇಬೇಕು ಎಂದು ಹೇಳಿದರು.
ರಾಜಕಾಲುವೆಗಳ ಪರಿಶೀಲನೆ ಮಾಡಿದ ಡಿಸಿಎಂ ಡಿಕೆಶಿ ಮುಖ್ಯವಾಗಿ, ದಿವ್ಯಶ್ರೀ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಅಗಲ ಅಳತೆಗೆ ಆದೇಶ ನೀಡಿದ್ದೇನೆ. ನೀರು ಹೆಚ್ಚಾದರೆ ಕಾಲುವೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ರಾಜಕಾಲುವೆ ಅಗಲೀಕರಣವನ್ನು ಅವರು ಮಾಡದಿದ್ದರೆ ಆ ಕೆಲಸವನ್ನು ನಾವೇ ಮಾಡುತ್ತೇವೆ. ಇನ್ನು ಮುಂದೆ ನೋಟೀಸ್ ನೀಡುವುದಿಲ್ಲ. ಬಾಯಿ ಮಾತಿನಲ್ಲಿ ಹೇಳುತ್ತೇವೆ. ಕೇಳದಿದ್ದರೆ ನಂತರ ಕಾನೂನು ಬಳಸಿ ನಮ್ಮ ಕೆಲಸ ಮುಂದುವರೆಸುತ್ತೇವೆ. ಎಲ್ಲವೂ ಒಂದೇ ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ, ತಕ್ಷಣದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕೆಲವು ಸೂಚನೆ ನೀಡಿದ್ದೇನೆ. ಈ ಭೇಟಿ ವೇಳೆ ಕೆಲವು ತಾಂತ್ರಿಕ ವಿಚಾರಗಳನ್ನು ಕೂಡ ಗಮನಿಸಿದ್ದೇನೆ ಎಂದರು.
ರಾಜಕಾಲುವೆಗಳ ಪರಿಶೀಲನೆ ಮಾಡಿದ ಡಿಸಿಎಂ ಡಿಕೆಶಿ ನಗರದಲ್ಲಿ 859 ಕಿ.ಮೀ ಪ್ರಾಥಮಿಕ ಹಾಗೂ ದ್ವಿತೀಯ ಕಾಲುವೆಗಳಿವೆ. ಆ ಪೈಕಿ 491 ಕಿ.ಮೀ ನಷ್ಟು ಕಾಲುವೆ ಕಾಮಗಾರಿ ಆರಂಭವಾಗಿದೆ. 195 ಕಿ.ಮೀ ನಷ್ಟು ಕಾಲುವೆ ಕಾಮಗಾರಿ 2022-23 ನೇ ಸಾಲಿನಲ್ಲಿ ಗುರುತಿಸಿದ್ದಾರೆ. 173 ಕಿ.ಮೀ ನಷ್ಟು ಕಾಲುವೆ ಕಾಮಗಾರಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಮಳೆ ನೀರಿನಿಂದ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬಿಡಿಎ ಹಾಗೂ ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಬೇಕು. ಕೆರೆಗಳಲ್ಲಿ ಹೂಳೆತ್ತುವ ಕೆಲಸ ಉತ್ತಮವಾಗಿ ಆಗುತ್ತಿದೆ. ಒಟ್ಟಿನಲ್ಲಿ ಕಾಮಗಾರಿಗಳ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ. ಇದಕ್ಕಾಗಿ ನಾನು ಕಚೇರಿಯಲ್ಲಿ ಕೂತು ಮಾರ್ಗದರ್ಶನ ನೀಡುವುದಿಲ್ಲ. ಕಣ್ಣಾರೆ ಕಂಡು ಇಲ್ಲಿನ ಪರಿಸ್ಥಿತಿ ಅರಿತು ಮಾರ್ಗದರ್ಶನ ನೀಡಲು ನಗರ ಪ್ರದಕ್ಷಣೆ ನಡೆಸಿದ್ದೇನೆ ಎಂದು ತಿಳಿಸಿದರು.
ರಾಜಕಾಲುವೆಗಳ ಪರಿಶೀಲನೆ ಮಾಡಿದ ಡಿಸಿಎಂ ಡಿಕೆಶಿ ಈ ವರ್ಷದ ಮಳೆಗೆ ನಾವು ಸಜ್ಜಾಗಬೇಕು, ಜಾಗೃತರಾಗಬೇಕು. ಅದಕ್ಕಾಗಿ ಬಾಟಲ್ ನೆಕ್ ಇರುವ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು. ಸಿಲಿಕನ್ ಸಿಟಿಯನ್ನು ಗ್ಲೋಬಲ್ ನಗರವಾಗಿ ನಿರ್ಮಾಣ ಮಾಡಲು ಪಣತೊಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಇದಕ್ಕೂ ಮುನ್ನ ಬೆಂಗಳೂರು ಪ್ರದಕ್ಷಣೆ ಹಾಕಿ ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಲ್ಲಿ ರಾಜಕಾಲುವೆಗಳ ಪರಿಶೀಲನೆ ಮಾಡುವ ಮೂಲಕ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಯಮಲೂರು, ಬೆಳ್ಳಂದೂರು ಕೆರೆ, ಸರ್ಜಾಪುರ ನೆರೆ ಪ್ರದೇಶ, ಗುಂಜೂರು ರಾಜಕಾಲುವೆ ಹಾಗೂ ವರ್ತೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರಾದ ತುಷಾರ್ ಗುರುನಾಥ್, ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇದ್ದರು.
ಇದನ್ನೂ ಓದಿ:ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆಶಿ ಬಿಬಿಎಂಪಿ ಬಸ್ಸಲ್ಲಿ ಬೆಂಗಳೂರು ರೌಂಡ್ಸ್