ಬೆಂಗಳೂರು:"ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಸ್ರೋ ಕಚೇರಿ ಭೇಟಿಗೆ ಪ್ರೋಟೋಕಾಲ್ ಪಾಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾವು ಹೋಗಿ ಅವರನ್ನು ಬರಮಾಡಿಕೊಳ್ಳಬೇಕಾಗಿತ್ತು. ಆದರೆ, ನಮಗೆ ಅಧಿಕೃತವಾಗಿ ಪ್ರಧಾನಿ ಕಚೇರಿಯಿಂದಲೇ ಮಾಹಿತಿ ಬಂದಿದ್ದರಿಂದ ನಾವು ಅದನ್ನು ಗೌರವಿಸಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಸದಾಶಿವನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಕಚೇರಿಯಿಂದ ಕರೆ ಬಂದ ಕಾರಣ ನಾವು ಮೋದಿಯವರನ್ನು ಬರಮಾಡಿಕೊಳ್ಳಲು ಹೋಗಿಲ್ಲವಷ್ಟೇ. ರಾಜಕೀಯ ಆಟ ಮುಗಿದಿದೆ. ನಾವು ಈಗ ಅಭಿವೃದ್ಧಿಯತ್ತ ನೋಡುತ್ತಿದ್ದೇವೆ. ಮುಖ್ಯಮಂತ್ರಿಯಾಗಲಿ ಅಥವಾ ನಾನಾಗಲಿ ಹೋಗಿ ಮೋದಿಯವರನ್ನು ಬರಮಾಡಿಕೊಳ್ಳಲು ಸಿದ್ಧರಿದ್ದೆವು. ಆದರೆ, ನಮಗೆ ಅವರಿಂದಲೇ ಬರುವುದು ಬೇಡವೆಂಬ ಅಧಿಕೃತ ಮಾಹಿತಿ ಬಂದ ಕಾರಣ ನಾವು ಅವರನ್ನು ಸ್ವಾಗತಿಸಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಆರ್ ಅಶೋಕ್ಗೆ ಡಿಸಿಎಂ ತಿರುಗೇಟು:ಪ್ರಧಾನಿ ಮೋದಿ ಆಗಮನದ ವೇಳೆ ಪ್ರೋಟೋಕಾಲ್ ಪಾಲನೆ ಮಾಡಿಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, "ನಾವು ಸರ್ಕಾರದ ವತಿಯಿಂದ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೊಡಬೇಕು ಎಂಬುದು ನಮಗೆ ಗೊತ್ತಿದೆ. ಬೇರೆ ರಾಜ್ಯಗಳ ತರಹ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿಗೆ ಗೌರವ ಕೊಡುತ್ತೇವೆ. ಆರ್.ಅಶೋಕ್ಗೆ ಸ್ವಲ್ಪ ಪ್ರಾಬ್ಲಂ ಇದೆ. ಕೇಂದ್ರ ಸರ್ಕಾರವೇ ನಮಗೆ ಬರೋದು ಬೇಡ ಅಂತ ಹೇಳಿತ್ತು. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ" ಎಂದು ತಿರುಗೇಟು ನೀಡಿದರು.
ಸಿಎಂ ಭೇಟಿಯಲ್ಲಿ ತಪ್ಪೇನಿದೆ?: ರೇಣುಕಾಚಾರ್ಯ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅವರ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ ಇರುತ್ತೆ. ಅದಕ್ಕಾಗಿ ಬಂದು ಭೇಟಿ ಮಾಡಿದ್ದಾರೆ. ಅಧಿಕಾರದಲ್ಲಿರುವ ನಾಯಕರ ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.
"ಸೋಮಶೇಖರ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇವತ್ತು ನಾನು ಅಲ್ಲಿಗೆ ಹೋಗ್ತಾ ಇದ್ದೇನೆ. ಕನಕಪುರ ರಸ್ತೆಯಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ಇದ್ದಾಗ ನಾವು ಗೌರವಕೊಡಬೇಕು. ಅದನ್ನು ಮಾಡ್ತಾ ಇದ್ದೇವೆ ಅಷ್ಟೇ. ಹಾಲಿ ಶಾಸಕರದ್ದು ಏನೇನೋ ಸಮಸ್ಯೆ ಇರುತ್ತೆ. ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ. ಪ್ರೀತಿ, ಸ್ನೇಹ, ಬಾಂಧವ್ಯ, ರಾಜಕೀಯ ಇರುತ್ತೆ. ಬೇರೆ ಬೇರೆ ವಿಚಾರಗಳು ಇರುತ್ತವೆ. ಅದನ್ನು ಸಾರ್ವಜನಿಕವಾಗಿ ಹೇಳಲು ಆಗಲ್ಲ" ಎಂದು ಹೇಳಿದರು.