ಕರ್ನಾಟಕ

karnataka

ETV Bharat / state

ಜನರ ಅಹವಾಲು ಆಲಿಸಲು 'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮ: ಡಿಸಿಎಂ

ಜನರ ಅಹವಾಲು ಆಲಿಸಲು "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

DCM DK Shivakumar  Citizen grievance program  ಬಾಗಿಲಿಗೆ ಬಂತು ಸರ್ಕಾರ  ಸೇವೆಗೆ ಇರಲಿ ಸಹಕಾರ
ಡಿಸಿಎಂ ಡಿಕೆಶಿ

By ETV Bharat Karnataka Team

Published : Dec 30, 2023, 6:48 AM IST

Updated : Dec 30, 2023, 7:18 AM IST

ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ

ಬೆಂಗಳೂರು: ನಾಗರಿಕರು ತಮ್ಮ ಅಹವಾಲುಗಳನ್ನು ನಮ್ಮ ಮನೆವರೆಗೂ ತರುವುದನ್ನು ತಪ್ಪಿಸಿ, ಸರ್ಕಾರವೇ ಅವರ ಬಳಿಗೆ ಹೋಗಿ ಅವರ ಸಮಸ್ಯೆ ಆಲಿಸಲು "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು 3 ರಿಂದ ತಿಂಗಳಾಂತ್ಯದವರೆಗೂ 10 ದಿನಗಳ ಕಾಲ ಜನಸಂಖ್ಯೆಗೆ ಅನುಗುಣವಾಗಿ ಎರಡು- ಮೂರು ವಿಧಾನಸಭಾ ಕ್ಷೇತ್ರಗಳ ಜನರ ಅಹವಾಲು ಆಲಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಕಂದಾಯ ಇಲಾಖೆಯ ಖಾತೆಯ ಸಮಸ್ಯೆ, ನಮ್ಮ ಇಲಾಖೆ ಹಾಗೂ ಸರ್ಕಾರದ ಐದು ಗ್ಯಾರಂಟಿ ಸೇರಿದಂತೆ ಜನರ ಸಮಸ್ಯೆಗಳ ವಿಚಾರವಾಗಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ನಾಗರಿಕರು ತಮ್ಮ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್

ಜನರು ನನ್ನ ಬಳಿ, ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರುಗಳ ಬಳಿ ಪ್ರತಿನಿತ್ಯ ನೂರಾರು ಅರ್ಜಿಗಳನ್ನು ತರುತ್ತಾರೆ. ಇದನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ರೂಪಿಸಿದ್ದೇವೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲು ಸ್ವೀಕಾರ ಮಾಡಲು ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಸಚಿವರುಗಳಿಗೆ ಆದೇಶ ನೀಡಿದೆ. ನಾನು ಈಗಾಗಲೇ ಕನಕಪುರ ಹಾಗೂ ಆನೇಕಲ್​ನಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದು, ಬೆಂಗಳೂರು ನಗರದಲ್ಲಿ ಮಾಡುತ್ತಿದ್ದೇನೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಲು ಆಹ್ವಾನ ನೀಡುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಒಂದು ಸ್ಥಳದಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ನಾವು ವಿಧಾನಸಭಾ ಕ್ಷೇತ್ರಗಳನ್ನು ವಿಭಾಗಿಸಿ ಆಯಾ ವಲಯದಲ್ಲಿ ಒಂದೊಂದು ದಿನ ಮೀಸಲಿಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ನಿಗದಿ ಮಾಡಲಾಗಿದ್ದು, ಅದರ ಮಾಹಿತಿಯನ್ನು ಜಾಹೀರಾತುಗಳ ಮೂಲಕ ಪ್ರಕಟಿಸಲಾಗುವುದು. ಅಹವಾಲು ನೀಡಲು ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್

ಈ ಕಾರ್ಯಕ್ರಮದ ಪ್ರಕ್ರಿಯೆ ಹೇಗಿರುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಅಹವಾಲು ನೀಡಲು ಬರುವವರ ಹೆಸರು ನೋಂದಣಿ ಮಾಡುತ್ತೇವೆ. ನಂತರ ಅವರ ಅಹವಾಲುಗಳನ್ನು ಸ್ವೀಕರಿಸುತ್ತೇವೆ. ಜನರ ಸಮಸ್ಯೆಗೆ ಪರಿಹಾರ ನೀಡಲು ನೂರಾರು ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರುತ್ತಾರೆ. ಜನರು ಯಾವುದೇ ದೂರು, ಅಹವಾಲು ಇದ್ದರೂ ಅದನ್ನು ನಮ್ಮ ಬಳಿಗೆ ತರಬಹುದು. ಕಾನೂನು ಚೌಕಟ್ಟಿನಲ್ಲಿ ಅವರಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

ನಿಯಮ ಉಲ್ಲಂಘನೆ ದೂರುಗಳಿದ್ದರೆ ಅವುಗಳನ್ನು ಪರಿಹರಿಸಲು ಬೇರೆ ವ್ಯವಸ್ಥೆ ಮಾಡುತ್ತಿದ್ದೇವೆ. ಸ್ವಯಂ ಘೋಷಣೆ ವ್ಯವಸ್ಥೆಯಲ್ಲಿ ಸರಿಯಾಗಿ ಪಾವತಿ ಮಾಡುತ್ತಾರೆ ಎಂದು ಭಾವಿಸಿದ್ದೆವು. ಈಗ ನಾವು ಎಲ್ಲಾ ದಾಖಲೆ ಪರಿಶೀಲನೆ ಮಾಡುತ್ತಿದ್ದೇವೆ. ನಮ್ಮದೇ ಆದ ರೀತಿಯಲ್ಲಿ ಪ್ರತಿ ಮನೆ ಅಳತೆ ಮಾಡುತ್ತಿದ್ದೇವೆ. ಆನಂತರ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಬೇಕು. ತೆರಿಗೆ ಕಟ್ಟದವರಿಗೆ ಬೀಗ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ನಾನು ಟ್ರಸ್ಟಿಯಾಗಿದ್ದ ಶಾಲೆಗೂ ಬೀಗ ಹಾಕಿದ್ದಾರೆ ಎಂದು ತಿಳಿಸಿದರು.

ಮಾಲ್​ಗಳೇ ತೆರಿಗೆ ಕಟ್ಟಿಲ್ಲ ಎಂದು ಕೇಳಿದ ಪ್ರಶ್ನೆಗೆ ದೊಡ್ಡ ದೊಡ್ಡವರನ್ನು ಮೊದಲು ಹುಡುಕಿ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ತೆರಿಗೆ ಹಣದಿಂದಲೇ ನಗರದ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. ನಾವು ಯಾರನ್ನೂ ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಒಂದುವೇಳೆ ಯಾರಾದರೂ ಹೆಚ್ಚಿನ ತೆರಿಗೆ ಪಾವತಿ ಮಾಡಿದ್ದರೆ, ಅವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು, ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆ, ಮೆಟ್ರೋ, ಬಿಡಿಎ, ಬಿಎಂಟಿಸಿ, ರೈಲ್ವೆ, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಇನ್ನಿತರೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ:'ಬರ ಪರಿಹಾರಕ್ಕೆ ಹಣವಿಲ್ಲ, ಸಲಹೆಗಾರರನ್ನು ನೇಮಿಸಿಕೊಳ್ಳಲು ಸಾಕಷ್ಟು ಹಣವಿದೆ'

Last Updated : Dec 30, 2023, 7:18 AM IST

ABOUT THE AUTHOR

...view details