ನವದೆಹಲಿ/ಬೆಂಗಳೂರು :ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೇಳಿದ್ದು, ಇನ್ನೂ ನಿಗದಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕರ್ನಾಟಕ ಭವನದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಗೆ ಸಮಯ ನೀಡಿದ್ದಾರೆ. ಮುಖ್ಯಮಂತ್ರಿಗಳು ಬರ ಪರಿಹಾರ, ನರೇಗಾ ಯೋಜನೆಯಲ್ಲಿ ಮಾನವ ಕೂಲಿ ದಿನಗಳ ಹೆಚ್ಚಳ ಸೇರಿದಂತೆ ಇತರ ಪ್ರಮುಖ ವಿಚಾರವಾಗಿ ಚರ್ಚೆ ಮಾಡಲಿದ್ದಾರೆ. ಪ್ರಧಾನಮಂತ್ರಿಗಳ ಭೇಟಿಗೆ ನನಗೆ ಇನ್ನು ಸಮಯ ನಿಗದಿಯಾಗಿಲ್ಲ. ಹೀಗಾಗಿ ಕೆಲವು ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ ಎಂದರು.
ಪಕ್ಷದ ಹೈಕಮಾಂಡ್ ನಾಯಕರ ಜತೆಗೆ ನಡೆಯುವ ಸಭೆ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು ಪಕ್ಷದ ನಾಯಕರ ಜತೆ ಸಭೆ ನಡೆಯಲಿದೆ. ಯಾವೆಲ್ಲಾ ವಿಷಯ ಚರ್ಚೆ ಮಾಡುತ್ತೇವೆ ಎಂಬುದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಿಗಮ, ಮಂಡಳಿಗಳಿಗೆ ಮೊದಲು ಶಾಸಕರ ನೇಮಕ ಆಗಲಿದೆ. ಸಾಧ್ಯವಾದರೆ ಕೆಲವು ಕಾರ್ಯಕರ್ತರ ನೇಮಕವನ್ನೂ ಮಾಡುತ್ತೇವೆ. ಒಟ್ಟು ಮೂರು ಹಂತಗಳಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು ಎಂದು ಹೇಳಿದರು.