ಬೆಂಗಳೂರು: ಬಿಜೆಪಿ ಸರ್ಕಾರ ಅಮಾಯಕ ಅಲ್ಪಸಂಖ್ಯಾತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ನಾವು ಕಾನೂನು ತಜ್ಞರ ಬಳಿ ಚರ್ಚೆ ನಡೆಸಿ ಸುಳ್ಳು ಕೇಸುಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಭಾನುವಾರ ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಅವರಿಗೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೇ 13ಕ್ಕೆ ಮುಂಚಿತವಾಗಿ ಕರ್ನಾಟಕದಲ್ಲಿ ಎಲ್ಲಾ ಧರ್ಮಿಯರೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಈಗ ನಿರ್ಭಯವಾಗಿ ಬದುಕುತ್ತಿದ್ದಾರೆ. ಬಿಜೆಪಿ ಸರ್ಕಾರ ಅಮಾಯಕ ಅಲ್ಪಸಂಖ್ಯಾತರ ಮೇಲೆ ಬಡವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು, ನಾವು ಕಾನೂನು ತಜ್ಞರ ಬಳಿ ಚರ್ಚೆ ನಡೆಸಿ ಸುಳ್ಳು ಕೇಸುಗಳ ಕುರಿತು ಚರ್ಚೆ ನಡೆಸುತ್ತೇವೆ" ಎಂದು ಭರವಸೆ ನೀಡಿದರು.
ರಾಜ್ಯದ ಅಲ್ಪಸಂಖ್ಯಾತರು ಈಗ ನಿರಾಳವಾಗಿ ಉಸಿರಾಡಬಹುದು. ನಮ್ಮ ಸರ್ಕಾರ ನಿಮಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಯಾವುದೇ ರೀತಿಯ ತೊಂದರೆ ಆದರೂ ನಾವು ಅಲ್ಪಸಂಖ್ಯಾತರ ಬೆನ್ನಿಗೆ ನಿಲ್ಲುತ್ತೇವೆ. ಕಾನೂನಿನ ಚೌಕಟ್ಟು ಮೀರಿ ಎಂದಿಗೂ ನಾವು ನಡೆಯುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಯುವಜನರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಸೀರ್ ಹುಸೇನ್ ಅವರದ್ದು ಸಮರ್ಥವಾದ ಆಯ್ಕೆ, ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.
ನಾವು ನಮ್ಮ ಪ್ರಣಾಳಿಕೆಯಲ್ಲಿ ಮಾತು ನೀಡಿದಂತೆ ಈ ರಾಜ್ಯದ ಮಕ್ಕಳಿಗೆ ಮಾರಕವಾದಂತಹ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೋಗಲಾಡಿಸಿ ಕರ್ನಾಟಕ ಶಿಕ್ಷಣ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ. ಅಲ್ಪಸಂಖ್ಯಾತ ಸಮುದಾಯ ಎಂದರೆ ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲ. ಜೈನ, ಬೌದ್ದ, ಸಿಖ್ ಧರ್ಮಿಯರಿಗೆ ರಾಜ್ಯದಲ್ಲಿ ಶಾಂತಿಯುತವಾಗಿ ಬಾಳುವ ವಾತಾವರಣ ನಿರ್ಮಾಣ ಮಾಡುತ್ತೇವೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಟ್ಟು ಅಧಿಕಾರಕ್ಕೆ ತಂದಿದ್ದೀರಿ. ನಿಮ್ಮ ನಂಬಿಕೆಗೆ ನಾವು ಮೋಸ ಮಾಡುವುದಿಲ್ಲ ಎಂದರು.
ಈ ದೇಶದ, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಯಾವುದೇ ಧರ್ಮ - ಜಾತಿಗಳನ್ನು ನೋಡದೆ ಸೇವೆ ಮಾಡುತ್ತಿವೆ. ಹೊಸ ತಲೆಮಾರನ್ನು ಕಟ್ಟುವ ಕೆಲಸ ಮಾಡುತ್ತಿವೆ. ಶಿಕ್ಷಣದ ಮೂಲಕ ಈ ದೇಶವನ್ನು ಕಟ್ಟುವ ಕೆಲಸವಾಗಬೇಕು. ಹೋರಾಟ ಮಾಡುವವನು ಗೆದ್ದೆ ಗೆಲ್ಲುತ್ತಾನೆ. ಅಲ್ಪಸಂಖ್ಯಾತ ಸಮುದಾಯ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ ಪರಿಣಾಮ ನಾವು ಅನೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಗೆದ್ದು ಸುಮ್ಮನೆ ಕುಳಿತಿಲ್ಲ 4 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇಡೀ ದೇಶವೇ ಕರ್ನಾಟಕದ ಕಡೆ ತಿರುಗುವಂತೆ ಮಾಡಿದ್ದೇವೆ, ಅದಕ್ಕೆ ನೀವೆ ಕಾರಣ. ಚುನಾವಣೆಗೂ ಮುಂಚೆ ಅವರ ಜೊತೆ ಮೈತ್ರಿ ಮಾಡಿಕೊಳ್ಳಿ, ಇವರ ಜೊತೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದರು. 135 ಸ್ಥಾನ ಗೆದ್ದೆ ಗೆಲ್ಲುತ್ತೇವೆ ಎಂದು ನಾನು ನಂಬಿಕೆ ಇಟ್ಟಿದ್ದೆ. ಈ ರಾಜ್ಯದ ಜನರ ಆಶೀರ್ವಾದದಿಂದ ಸದೃಢ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಮುಂದಿನ ಗುರಿ 2024ರ ಚುನಾವಣೆ. ಕರ್ನಾಟಕದಲ್ಲಿ ಆಶೀರ್ವದಿಸಿದಂತೆ, ಲೋಕಸಭಾ ಚುನಾವಣೆಯಲ್ಲೂ ನಿಮ್ಮ ಅಭಯ ನಮಗೆ ಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ :ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿ, 'ಗ್ಲೋಬಲ್ ಸೌತ್' ಪರಿಕಲ್ಪನೆ ಹೊಸದಲ್ಲ: ಕಾಂಗ್ರೆಸ್