ಸರ್ಕಾರ ಬೀಳಿಸುವ ಬಿಜೆಪಿ ಷಡ್ಯಂತ್ರ ಫಲಿಸಲ್ಲ: ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು: ಸರ್ಕಾರ ಬೀಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರ ಫಲಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಶನಿವಾರ ಹೈದರಾಬಾದ್ಗೆ ತೆರಳುವ ಮೊದಲು ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಶಾಸಕ ರವಿ ಗಣಿಗ ಅವರ ಬಿಜೆಪಿಯ ಆಮಿಷದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಇದ್ದಾರೆ. ಆದರೆ, ಇದರಿಂದ ಏನೂ ಆಗುವುದಿಲ್ಲ ಎಂದು ತಿಳಿಸಿದರು.
ಅನಗತ್ಯ ಹೇಳಿಕೆ ಕೊಟ್ಟರೆ ನೊಟೀಸ್:ಪಕ್ಷದ ಶಾಸಕರು ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು ಎಂದು ಮನವಿ ಹಾಗೂ ಎಚ್ಚರಿಕೆ ನೀಡುತ್ತೇನೆ. ಇಷ್ಟರ ನಂತರವೂ ಹೇಳಿಕೆ ನೀಡಿದರೆ ವಿಧಿ ಇಲ್ಲದೇ ಅವರಿಗೆ ನೊಟೀಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಗಮ ಮಂಡಳಿ ನೇಮಕಾತಿ ವಿಚಾರ: ತೆಲಂಗಾಣ ಚುನಾವಣೆ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ತೆರಳಿದರು. ಬೆಳಗ್ಗೆ 9.15ರ ಇಂಡಿಗೋ ವಿಮಾನದಲ್ಲಿ ಡಿಕೆ ಶಿವಕುಮಾರ್ ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಸಿಎಂ ಇಬ್ಬರೂ ಈ ಬಗ್ಗೆ ನಿನ್ನೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ನಿಗಮ ಮಂಡಳಿ ಆಯ್ಕೆ ಎರಡು ಭಾಗವಾಗಿ ಮಾಡಬೇಕಿದೆ. ಯಾರಿಗೆಲ್ಲ ಕೊಡಬೇಕು ಎಂದು ಈಗಾಗಲೇ ಪಟ್ಟಿ ಮಾಡಿದ್ದೇವೆ. ಯಾಕೆಂದರೆ ಬಹಳ ಸೀನಿಯರ್ ಲೀಡರ್ಗಳಿಗೆ ಸ್ಥಾನಮಾನ ಕೊಡಬೇಕಿದೆ. ನಮ್ಮ ಕಾಂಗ್ರೆಸ್ ಕಾರ್ಯದರ್ಶಿಗಳು ಇಲ್ಲಿಗೆ ಬರಬೇಕಿದೆ. ಅವರು ಪಟ್ಟಿಯನ್ನು ಪರಿಶೀಲನೆ ಮಾಡಲಿದ್ದಾರೆ. ಬಳಿಕ ಯಾರಿಗೆಲ್ಲ ನೀಡಬಹುದೆಂದು ನೋಡುತ್ತಾರೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಮಧ್ಯಪ್ರದೇಶ ಚುನಾವಣೆ ಘೋಷಣೆ ಆಗಿದೆ. ನಮ್ಮ ಉಸ್ತುವಾರಿಗಳು ಮಧ್ಯಪ್ರದೇಶ ಚುನಾವಣೆ ನೋಡಿಕೊಂಡು ರಾಜ್ಯಕ್ಕೆ ಬರುತ್ತಾರೆ. ಬಳಿಕ ನಿಗಮ ಮಂಡಳಿ ಪಟ್ಟಿಯನ್ನು ಘೋಷಣೆ ಮಾಡುತ್ತೇವೆ ಎಂದು ಹೇಳಿದರು. ಬಸವಣ್ಣ ಜಿಲ್ಲೆ ವಿಚಾರವಾಗಿ ಡಿಕೆ ಪ್ರತಿಕ್ರಿಯಿಸಿ, ಈ ವಿಚಾರ ನನಗೆ ಗೊತ್ತಿಲ್ಲ. ಮುಂದೆ ಮಾತನಾಡುವೆ ಎಂದು ಹೇಳಿ ತೆರಳಿದರು.
ಇದನ್ನೂ ಓದಿ :ಈ ಹಿಂದೆ 17 ಮುಠ್ಠಾಳರು ಪಕ್ಷ ಬಿಟ್ಟು ಹೋದಂತೆ, ಈಗ ಯಾರೂ ಬಿಜೆಪಿಗೆ ಹೋಗಲ್ಲ: ಬೇಳೂರು ಗೋಪಾಲಕೃಷ್ಣ