ವರ್ಗಾವಣೆ ದಂಧೆ ಆರೋಪ.. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ.. ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್ ಡಿಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ದಾಖಲೆ ಕೊಡುತ್ತೇನೆ ಎಂದಿದ್ದಾರಲ್ಲ, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ಸದಾಶಿವ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಡಿಕೆ ಅವರ ಆರೋಪಕ್ಕೆ ಮಾಧ್ಯಮಗಳ ಮುಂದೆ ಉತ್ತರ ನೀಡಿದರೆ ಸಾಲದು, ಅವರು ಪ್ರಧಾನ ಮಂತ್ರಿವರೆಗೂ ಹೋಗಿದ್ದು, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಡಿಕೆಶಿ ವಿರುದ್ಧ ಗಂಭೀರ ಆರೋಪ:ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಿನ್ನೆ(ಶನಿವಾರ) ಮಾಧ್ಯಮಗೋಷ್ಟಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಡಿಸಿಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಿಬಿಎಂಪಿಯಲ್ಲಿ ಗುತ್ತಿಗೆದಾರರ ಬಿಲ್ ಪಾಸ್ ಮಾಡಲು ಶೇ. 10 ರಿಂದ 15ರಷ್ಟು ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿದ್ದರು. ಜತೆಗೆ ನೈಸ್ ಹಗರಣದ ದಾಖಲೆಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಗುಡುಗಿದ್ದರು.
ನಾಳೆಯಿಂದ ನಾನು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾ ನಾಯಕರುಗಳ ಜತೆ ಸಭೆ ಮಾಡುತ್ತಿದ್ದೇವೆ. ಕೆಲವು ಸಮುದಾಯಗಳ ಮುಖಂಡರ ಜೊತೆ ಚರ್ಚೆ ಮಾಡಬೇಕಿದೆ. ಅದರ ಭಾಗವಾಗಿ ಇಂದು ಪಕ್ಷದ ಅಲ್ಪಸಂಖ್ಯಾತ ನಾಯಕರ ಜೊತೆ ಸಭೆ ಮಾಡುತ್ತಿದ್ದೇನೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಇದನ್ನೂ ಓದಿ:ಕನಸು ಭಗ್ನಗೊಂಡ ಹೆಚ್ಡಿಕೆ ಭಗ್ನ ಪ್ರೇಮಿಯಂತೆ ವ್ಯಗ್ರರಾಗಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಟೀಕೆ
ದೆಹಲಿಯಲ್ಲೇ ದಾಖಲೆ ಬಿಡುಗಡೆ ಮಾಡ್ತೇನಿ:ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ, ಯಾವತ್ತೂ ಕೂಡ ನಾನು ಆ ರೀತಿ ಮಾಡಿದವನಲ್ಲ. ಕಾಂಗ್ರೆಸ್ನವರು ನನ್ನ ಹೆಸರೇಳಿ ಹಿಟ್ ಅಂಡ್ ರನ್ ಅಂತಾರೆ. ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಪೇಸಿಎಂ ಅಂತಾ ಪೋಸ್ಟರ್ ಬೇರೆ ಅಂಟಿಸಿದ್ದರು. ಆದರೆ ಅವರೀಗ ಮಾಡ್ತಿರೋದು ಏನು?. ಅವರ ಯಾವುದೇ ಆರೋಪಗಳಿಗೆ ದಾಖಲೆಗಳಿವೆಯಾ? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಿನ್ನೆ(ಶನಿವಾರ) ಮಾಧ್ಯಮಗೋಷ್ಟಿ ನಡೆಸಿದ್ದ ಕುಮಾರಸ್ವಾಮಿ, ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ನಾನು ವಿದೇಶ ಪ್ರವಾಸದಲ್ಲಿದ್ದೆ. ಮಾಧ್ಯಮಗಳ ಸುದ್ದಿಗಳನ್ನು ನಾನು ಗಮನಿಸಿದ್ದೇನೆ. ಜಯಚಂದ್ರ ಅವರಿಗೆ ಬೆದರಿಕೆ ಹಾಕಿದವರು ಯಾರು? ಜಯಚಂದ್ರ ಅವರು ದೆಹಲಿ ಉಸ್ತುವಾರಿ ಕಾರ್ಯದರ್ಶಿ, ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದು ಯಾರು? ಹಲವು ಕರೆಗಳು ಅವರಿಗೆ ಬಂದಿವೆ ಎಂದು ತಿಳಿಸಿದ್ದರು.
2020-21ರಲ್ಲಿ 15% ಕಮಿಷನ್ ಕೊಡಿ ಅಂದಿದ್ದಾರೆ. ಬಿಡಿಎನಲ್ಲಿ ಕಮಿಷನ್ ಕೊಡಿ ಎಂದಿದ್ದಾರೆ. ಈಗ ಒಬ್ಬರು ಅಡ್ವೈಸರ್ ಅನ್ನೂ ಇಟ್ಟುಕೊಂಡಿದ್ದಾರೆ. ಅವರಿಗೆ ತಲುಪಿಸಿ ಆಮೇಲೆ ಆರ್ಡರ್ ಕೊಡಿ ಅಂತಾರೆ. ನಿಮ್ಮ ಆ್ಯಕ್ಟಿವಿಟೀಸ್ ನೊಡೋಕೆ ಕ್ಯಾಮರಾ ಇಡ್ಲಾ? ಇವರು ಏನ್ಮಾಡ್ತಾರೆ ಅಂತ ನೊಡೋಕೆ ನಾನು ಪ್ರತಿದಿನ ಕ್ಯಾಮರಾ ಇಟ್ಟುಕೊಂಡು ಹೋಗ್ಲಾ? ಎಂದು ಡಿಸಿಎಂ ಡಿಕೆಶಿ ವಿರುದ್ಧ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:'ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ', ದೆಹಲಿಯಲ್ಲೇ ದಾಖಲೆ ಬಿಡುಗಡೆ ಮಾಡ್ತೇನಿ: ಮಾಜಿ ಸಿಎಂ ಹೆಚ್ಡಿಕೆ