ಕರ್ನಾಟಕ

karnataka

ETV Bharat / state

ಜೆಡಿಎಸ್‌ ಎನ್‌ಡಿಎಗೆ ಆ ಪಕ್ಷದ ಕಾರ್ಯಕರ್ತರು 'ಇಂಡಿಯಾ'ಗೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಜೆಡಿಎಸ್ ಪಕ್ಷ ಎನ್‌ಡಿಎಗೆ ಸೇರಿದ ಕಾರಣ ಅವರ ಕಾರ್ಯಕರ್ತರು ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟಕ್ಕೆ ಸೇರುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

Etv Bharatdcm-dk-shivakumar-reaction-on-jds-party
ಜೆಡಿಎಸ್​ ರಾಷ್ಟ್ರಾಧ್ಯಕ್ಷರು ಪಕ್ಷವನ್ನು ಕೇರಳಕ್ಕೆ, ಕರ್ನಾಟಕಕ್ಕೆ ಒಂದೊಂದು ಭಾಗ ಎಂದು ಹೇಗೆ ಮಾಡುತ್ತಾರೋ: ಡಿ.ಕೆ.ಶಿವಕುಮಾರ್ ವ್ಯಂಗ್ಯ

By ETV Bharat Karnataka Team

Published : Oct 25, 2023, 5:24 PM IST

Updated : Oct 25, 2023, 6:11 PM IST

ಡಿ ಕೆ ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: "ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜೆಡಿಎಸ್ ಎನ್‌ಡಿಎಗೆ ಸೇರಿದ ಕಾರಣ, ಕೇರಳ ಸೇರಿದಂತೆ ಇತರೆ ರಾಜ್ಯಗಳ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ 'ಇಂಡಿಯಾ' ಮೈತ್ರಿಕೂಟಕ್ಕೆ ಸೇರುತ್ತಿದ್ದಾರೆ" ಎಂದರು.

"ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ. ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಈ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.

"ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆವು‌. ಆದರೆ ಇಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಂಬಾರಿಯೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಟ್ಯಾಬ್ಲೋ ಮೆರವಣಿಗೆ ಮಾಡಲಾಯಿತು. ಇಡೀ ದೇಶವೇ 'ಕರ್ನಾಟಕ ಮಾದರಿ' ಅನುಕರಣೆ ಮಾಡಲು ಕಾಯುತ್ತಿದೆ. ಈ ದೇಶದ ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಐದು ಗ್ಯಾರಂಟಿಗಳ ಬಗ್ಗೆ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದಾರೆ" ಎಂದು ಹೇಳಿದರು.

"ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲು ಮೈಸೂರಿನಿಂದ ಓಡೋಡಿ ಬಂದೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ. ಈ ನಾಡಿನ ಜನತೆಯೇ ನಮ್ಮ ದೇವರುಗಳು. ಕಾಲನ ಓಟದಲ್ಲಿ ಯಾವುದೂ ಶಾಶ್ವತವಲ್ಲ, ಬಿಜೆಪಿ- ಜೆಡಿಎಸ್ ಗೆಳೆಯರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಜನರ ಸೇವೆಯೇ ಜನಾರ್ದನ ಸೇವೆ ಎಂದು ನಾವೆಲ್ಲಾ ಕೆಲಸ ಮಾಡಬೇಕಿದೆ. ಪಕ್ಕಕ್ಕೆ ಸೇರುವವರೆಲ್ಲಾ ಹಳೆಯದನ್ನೆಲ್ಲಾ ಮರೆತು ಪಕ್ಷಕ್ಕೆ ದುಡಿಯಬೇಕು" ಎಂದು ತಿಳಿಸಿದರು.

ಮಾಜಿ ಮೇಯರ್ ನಾಗರಾಜ್, ಮಾಜಿ ಉಪ ಮೇಯರ್ ಪಾಲಾಕ್ಷ, ರಾಜಣ್ಣ, ಮಾಜಿ ನಗರ ಸಭಾ ಸದಸ್ಯರಾದ ಉಮಾನ ಸೇರಿದಂತೆ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ರಾಜ್ಯ ವಕ್ತಾರ ಎಂ. ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರುಗಳನ್ನು ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.

ಇದನ್ನೂ ಓದಿ:ಬೆಂಗಳೂರಿಗೆ ಕನಕಪುರ ಸೇರ್ಪಡೆ ವಿವಾದ: ಜನರು ಮೌನ ವಹಿಸದಿರಿ, ಪ್ರತಿಕ್ರಿಯಿಸಿ ಎಂದ ಆರ್.ಅಶೋಕ್

Last Updated : Oct 25, 2023, 6:11 PM IST

ABOUT THE AUTHOR

...view details