ಬೆಂಗಳೂರು:ನಮ್ಮ ಬಳಿ ಇರೋ ಪಟ್ಟಿ ತೆಗೀಲಾ. ಒಂದಿಂಚು ಭೂಮಿ ಇಲ್ಲ ಅಂತಾರೆ. ಇವರದ್ದು ಹಾಗಾದ್ರೆ ಏನೂ ಇಲ್ಲವಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಏನು ಬೇಕಾದ್ರೂ ಬಿಚ್ಚಲಿ, ಪಟ್ಟಿ ತೆಗೀಲಿ, ಏನು ಬೇಕಾದ್ರೂ ಮಾಡಲಿ. ಹಿಂದೆ ಅಧಿಕಾರದಲ್ಲಿ ಇದ್ದಾಗ ಇವರಿಗೆ ಅಥಾರಿಟಿ ಇತ್ತು ಯಾಕೆ ತನಿಖೆ ಮಾಡಲಿಲ್ಲ?. ಪ್ಯಾಂಟ್ ಹಾಕಿದವರು ಯಾರು, ರೈತರು ಯಾರು, ಪಂಚೆ ಕಟ್ಟಿರೋರು ಯಾರು ಅಂತ ಗೊತ್ತಾಗಿದೆ. ರಾಜಕಾರಣಿಗಳದ್ದು ಯಾರದ್ದೂ ಇಲ್ಲವಾ?. ನಮ್ಮತ್ರ ಪಟ್ಟಿ ಇಲ್ಲವಾ?. ನನ್ನನ್ನು ಇಡಿ, ಐಟಿ ಎಲ್ಲರೂ ಸ್ಕ್ಯಾನ್ ಮಾಡಿದ್ದಾರೆ. ಅದರ ವರದಿ ಕೂಡ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿವಿಧ ಪ್ರಕರಣಗಳ ತನಿಖೆ ವಿಚಾರವಾಗಿ ಮಾತನಾಡಿ, ಹಿಂದೆ ನಾವು ಸಾಕಷ್ಟು ಆರೋಪ ಮಾಡಿದ್ದೆವು. ರಮೇಶ್ ಜಾರಕಿಹೊಳಿದು, ಮಾಜಿ ಆರ್ಡಿಪಿಆರ್ ಮಂತ್ರಿಗಳದ್ದು. ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡ್ತಿದ್ದೇವೆ. ಸಂತೋಷ್ ಪಾಟೀಲ್ ವಿಚಾರವಾಗಿ ತನಿಖೆ ಮಾಡುವಂತೆ ಅವರ ಮನೆಯವರು ಮನವಿ ಮಾಡಿದ್ರು. ತನಿಖೆ ನಡೆಯೋ ಮೊದಲೇ ದೋಷಮುಕ್ತರಾಗಿ ಬರ್ತಾರೆ ಅಂತ ಅವರೇ ಹೇಳಿಕೊಂಡಿದ್ರು. ಇನ್ವೆಸ್ಟಿಗೇಷನ್ ಟೀಂನ ದಿಕ್ಕು ತಪ್ಪಿಸಿದ್ರು. ಅದೇ ದಾರಿ ನಮಗೆ ತೋರಿಸಿದ್ದಾರೆ. ಸಮಾಜ ಏನು ಒಪ್ಪಿದೆಯೋ ನಾವು ಅದನ್ನು ಮಾಡ್ತಿದ್ದೇವೆ. ನೀವು ಕ್ಲೀನ್ ಇದ್ದಾಗ ಭಯ ಯಾಕೆ?. ನಮ್ಮ ಮೇಲೆ ಆರೋಪ ಮಾಡಲಿಲ್ಲವಾ?. ಬೆಂಗಳೂರು ಸುತ್ತ ಮುತ್ತಲಿನ ಪಟ್ಟಿ ತೆಗೀಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ಎಚ್ಚರಿಕೆ ನೀಡಿದರು.