ಕರ್ನಾಟಕ

karnataka

ETV Bharat / state

ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐ ಹೇಳಿದೆ, ಆದ್ರೆ ನನ್ನ ವಿಚಾರಣೆಗೆ ಯಾವ ಅಧಿಕಾರಿಯೂ ಬಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್ - ಸಿಬಿಐ ತನಿಖೆ

ರಾಜಕೀಯ ಉದ್ದೇಶಕ್ಕಾಗಿಯೇ ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಬಿಜೆಪಿ ಶಾಸಕರ ವಿರುದ್ಧ ಇಲ್ಲದ ತನಿಖೆ, ನನ್ನ ವಿರುದ್ಧ ಮಾತ್ರ ಇದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

shivakumar
ಡಿಸಿಎಂ ಡಿ.ಕೆ.ಶಿವಕುಮಾರ್

By ETV Bharat Karnataka Team

Published : Oct 20, 2023, 2:27 PM IST

Updated : Oct 20, 2023, 4:31 PM IST

ಕುಮಾರಕೃಪ ಅತಿಥಿ ಗೃಹದ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದರು. ಬಿಜೆಪಿ ಪಕ್ಷದ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೇ ನನ್ನದನ್ನು ಮಾತ್ರ ನೀಡಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಕುಮಾರಕೃಪ ಅತಿಥಿ ಗೃಹದ ಬಳಿ ಮಾತನಾಡಿದ ಅವರು, ಅಡ್ವೊಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೇ ಯಡಿಯೂರಪ್ಪ ನೇರವಾಗಿ ಸಿಬಿಐ ತನಿಖೆಗೆ ಅನುಮತಿ ನೀಡಿದರು. ಸಿಬಿಐ ಅವರು ಶೇ. 90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ ಎಂದರು.

ವಿರೋಧ ಪಕ್ಷಗಳ ಟೀಕೆ ಬಗ್ಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ಗೌರವ ಕೊಡಬೇಕು. ನೀವು ಅಷ್ಟೇ, ಮಿಕ್ಕಿದವರ ಮಾತಿಗೆ ಕಿವಿಗೊಡಬಾರದು ಎಂದು ಹೇಳಿದರು.

ಪೂರ್ಣಿಮಾ ಶ್ರೀನಿವಾಸ್ ಅವರ ಪಕ್ಷ ಸೇರ್ಪಡೆ ಹಾಗೂ ಕಾಡುಗೊಲ್ಲ ಸಮುದಾಯದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಬಲವಾಗಿರುವವರನ್ನು ಪ್ರಬಲವಾಗಿ ವಿರೋಧ ಮಾಡುವುದು ರಾಜಕೀಯದಲ್ಲಿ ಸಹಜ. More Strong More Enemy ಎಂಬಂತೆ ರಾಜಕೀಯದಲ್ಲಿ ಪ್ರಬಲರಿಗೆ ವಿರೋಧಿಗಳು ಹೆಚ್ಚು. ಪೂರ್ಣಿಮಾ ಶ್ರೀನಿವಾಸ್ ಅವರು ಶಾಸಕಿಯಾಗಿದ್ದರು, ಅವರದೇ ಆದ ಶಕ್ತಿ ಇದೆ. ಅವರ ತಂದೆ ನಮ್ಮ ಪಕ್ಷದಲ್ಲಿದ್ದು ಮಂತ್ರಿಯಾಗಿದ್ದರು. ಇಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರಿಯಿಲ್ಲ ಎಂದು ಭಾವಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು.

ಇನ್ನೊಂದೆಡೆ, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ, ಪ್ರಕರಣ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ :ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿ ಸಿಬಿಐ 2020ರ ಅ.3ರಂದು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ 2022 ರ ಜುಲೈನಲ್ಲಿ ಡಿಕೆಶಿ ಹೈಕೋರ್ಟ್​​ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಸಿಬಿಐ ತನಿಖೆಗೆ 2023ರ ಫೆ.10ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆಯನ್ನ ಈವರೆಗೂ ವಿಸ್ತರಿಸಿಕೊಂಡು ಬರಲಾಗಿತ್ತು. ಆದರೆ, ಇದೀಗ ಅರ್ಜಿ ವಜಾಗೊಂಡ ಹಿನ್ನೆಲೆ ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆ ತೆರವಾದಂತಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ನ್ಯಾಯಪೀಠ ಕೆಲ ದಿನಗಳ ಹಿಂದಷ್ಟೇ ವಜಾ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಇದನ್ನೂ ಓದಿ :ಆದಾಯ ಮೀರಿ ಆಸ್ತಿ ಗಳಿಕೆ ಆರೋಪ : ಡಿಕೆಶಿ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ, ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

Last Updated : Oct 20, 2023, 4:31 PM IST

ABOUT THE AUTHOR

...view details