ಬೆಂಗಳೂರು/ನವದೆಹಲಿ:ತಮಿಳುನಾಡು ಮತ್ತು ರಾಜ್ಯದ ನಡುವಿನಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಬುಧವಾರದ ಬದಲು ಗುರುವಾರ ಬೆಳಗ್ಗೆ ಭೇಟಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿಸುವುದಾಗಿ ಹೇಳಿದ್ದರು. ಅವರು ಸದ್ಯ ರಾಜಸ್ಥಾನ ಪ್ರವಾಸದಲ್ಲಿದ್ದು, ದೆಹಲಿಗೆ ಬರುವುದು ತಡವಾಗುವ ಕಾರಣ ಜಲಶಕ್ತಿ ಸಚಿವರ ಭೇಟಿಯನ್ನು ಮುಂದೂಡಲಾಗಿದೆ ಎಂದರು.
ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಸಚಿವರು ದೆಹಲಿಯಲ್ಲೇ ಉಳಿಯಲಿದ್ದೇವೆ. ಮಧ್ಯರಾತ್ರಿಯಾದರೂ ಸರಿ ಸಚಿವರನ್ನು ಭೇಟಿ ಮಾಡಲು ತಯಾರಿದ್ದೇವೆ. ರಾಜ್ಯದ ನೀರಿನ ಕೊರತೆಯ ಬಗ್ಗೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲು ಕಾನೂನು ತಂಡ ಸಿದ್ಧವಾಗಿದ್ದು, ಸಮರ್ಥವಾಗಿ ವಾದ ಮಾಡಲಿದೆ ಎಂದು ಹೇಳಿದರು.
ಗುರುವಾರ ಬೆಳಗ್ಗೆ ಸರ್ವಪಕ್ಷ ಸಂಸದರ ಸಭೆಯಲ್ಲಿ ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಬೆಂಬಲ ನೀಡಲಾಗುವುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಬುಧವಾರ ಸಂಜೆ 4.30 ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಿಸಲಾಗಿದೆ.
ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ:ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರ ಆದೇಶಿಸಿದ ಬಳಿಕ, ರಾಜ್ಯ ಸರ್ಕಾರ ದೆಹಲಿಯ ತಾಜ್ ಹೋಟೆಲ್ನಲ್ಲಿ ಸರ್ವಪಕ್ಷ ಸಂಸದರ ಸಭೆಯನ್ನು ಬುಧವಾರ ನಡೆಸಿತು. ಸಭೆಯಲ್ಲಿ ಸರ್ವಪಕ್ಷಗಳ ಸಂಸದರು ರಾಜ್ಯದ ಪರವಾಗಿ ನಿಲ್ಲುವುದಾಗಿ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಶಿವಕುಮಾರ್ ಅವರು, ರಾಜಕೀಯ ಭಿನ್ನಾಭಿಪ್ರಾಯ ಮನತು ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಪರ ನಿಲ್ಲುವುದಾಗಿ ಸರ್ವಪಕ್ಷಗಳ ಸಂಸದರು ಮಾತು ಕೊಟ್ಟಿದ್ದಾರೆ. ಕಾವೇರಿ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಎಲ್ಲಾ ಸಂಸದರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮಂಗಳವಾರ ತಡರಾತ್ರಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಮಳೆ ಕಡಿಮೆ ಬಿದ್ದಾಗ ನೀರನ್ನು ಎಷ್ಟು ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸರಿಯಾದ ಸೂತ್ರ ಹಂಚಿಕೆ ಮಾಡಿಲ್ಲ. 5 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಹೇಳಿರುವುದು ಅವೈಜ್ಞಾನಿಕ ಎಂದು ಹೇಳಿದರು.
ಸುಪ್ರೀಂನಲ್ಲಿ ನ್ಯಾಯದ ಭರವಸೆ:ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆ ಅತ್ಯಂತ ಕಡಿಮೆ ಇದ್ದು, ಇದನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಕಳೆದ 120 ವರ್ಷಗಳಲ್ಲೇ ಅತ್ಯಂತ ಕಷ್ಟದ ಸಂದರ್ಭವನ್ನು ಕರ್ನಾಟಕ ಎದುರಿಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶ ನೀಡಿದ್ದು ಇಷ್ಟೆಲ್ಲಾ ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಇದನ್ನೂ ಓದಿ:ಕಾವೇರಿ ನೀರು: CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ; ಸಿಎಂ ಸಿದ್ದರಾಮಯ್ಯ