5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರ ಹೇಳಿದೆ, ಆದರೆ ನಮ್ಮ ಬಳಿ ನೀರಿಲ್ಲ: ಡಿಕೆಶಿ ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡಲು ಹೇಳಿದೆ. ಆದರೆ ನಮ್ಮ ಹತ್ತಿರ ನೀರಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕೆ ಕೆ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ನಮಗೆ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಸಿಎಂ ಹಾಗೂ ನಾನು ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ. ಸದ್ಯಕ್ಕೆ ನಮ್ಮ ಬಳಿ ನೀರಿಲ್ಲ. ಈ ಬಗ್ಗೆ ಸಿಎಂ ಬಳಿಯೂ ಚರ್ಚೆ ನಡೆಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾಳೆ ನಡೆಯುವ ಮೇಲ್ಮಟ್ಟದ ಸಮಿತಿ ಸಭೆಯಲ್ಲಿ ಏನು ಪ್ರಸ್ತಾಪ ಮಾಡಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿನ ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ. ವಾಸ್ತವಾಂಶವನ್ನು ಅವರಿಗೆ ತಿಳಿಸುತ್ತೇನೆ. ಕುಡಿಯುವ ನೀರನ್ನು ನಾವು ಉಳಿಸಲೇಬೇಕಾಗಿದೆ ಎಂದರು.
ಮೊದಲು ಕುಡಿಯುವ ನೀರು ಮುಖ್ಯ. ನಾನು ಅವರಿಗೆ ಬಹಳ ಕಷ್ಟ ಆಗುತ್ತೆ ಎಂದು ಮನವಿ ಮಾಡುತ್ತೇವೆ. ಜನ ನಮಗೆ ಸಹಕಾರ ನೀಡಬೇಕು. ಪ್ರತಿಪಕ್ಷಗಳು ರಾಜ್ಯದ ಹಿತಕ್ಕಾಗಿ ಸಹಕಾರ ಕೊಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ಇದರಲ್ಲಿ ರಾಜಕೀಯ ಇದೆ ಅಂತ ನಾನು ಹೇಳಲು ಆಗುವುದಿಲ್ಲ. ಆ ನಿರ್ವಹಣಾ ಪ್ರಾಧಿಕಾರವನ್ನು ನಾನು ರಾಜಕೀಯ ಅಂತ ಹೇಳಲು ಆಗುವುದಿಲ್ಲ. ನ್ಯಾಯಾಧೀಶರ ಸ್ಥಾನದಲ್ಲಿ ಕೂತಿರುವವರನ್ನು ನೀವು ರಾಜಕಾರಣ ಮಾಡುತ್ತೀರ ಅಂತ ಪ್ರತಿಪಕ್ಷಗಳು ಮಾತನಾಡಿದ ಹಾಗೆ ಮಾತನಾಡಲು ಆಗುತ್ತಾ?. ಪ್ರಾಧಿಕಾರದಲ್ಲಿ ಕೇಂದ್ರ ಸರ್ಕಾರದ ನಾಲ್ಕೈದು ಅಧಿಕಾರಿಗಳು ಇರುತ್ತಾರೆ. ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳು ಇರುತ್ತಾರೆ. ನಮ್ಮವರೂ ಇರುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ನಾನು ರಾಜಕೀಯ ಎಂದು ಮಾತನಾಡಲು ಆಗುವುದಿಲ್ಲ ಎಂದು ಡಿಕೆಶಿ ತಿಳಿಸಿದರು.
ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ರಾಜ್ಯಕ್ಕೆ ಶಿಫಾರಸು ಮಾಡಿದೆ. ಕರ್ನಾಟಕ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಪ್ರಾಧಿಕಾರ ಶಿಫಾರಸು ಮಾಡಿದೆ. ಪ್ರಾಧಿಕಾರದ ಅಧ್ಯಕ್ಷ ವಿನೀತ್ ಗುಪ್ತ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ಮಂಗಳವಾರ ನಡೆದ ಸಭೆಯಲ್ಲಿ ಈ ಶಿಫಾರಸು ಮಾಡಿದೆ. ಬುಧವಾರ ಅಥವಾ ಗುರುವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಈ ಸಂಬಂಧ ಪ್ರಾಧಿಕಾರ ಆದೇಶ ಹೊರಡಿಸಲಿದೆ.
ಇದನ್ನೂ ಓದಿ: ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರವಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್