ಬೆಂಗಳೂರು : ಭಾನುವಾರವಾದರೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ತಮ್ಮ ನಿವಾಸದಲ್ಲಿ ವಿವಿಧ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಸಕ್ರಿಯವಾಗಿ ಕಾರ್ಯನಿರತರಾಗಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್, ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತ, ಅನೇಕ ಸಮುದಾಯದ ಮುಖಂಡರನ್ನು ಭೇಟಿ ಮಾಡುತ್ತ, ಸಮಾಲೋಚನೆ ನಡೆಸುತ್ತಿದ್ದಾರೆ.
ತಮ್ಮ ಮುಂದಿನ ಬಜೆಟ್ ಮಂಡನೆಯ ಸಿದ್ಧತೆಯಲ್ಲಿ ಸಿಎಂ ಸಿದ್ದರಾಮಯ್ಯ ಇದ್ದರೆ, ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಡಿಕೆಶಿ ನಿರತರಾಗಿದ್ದಾರೆ. ಈ ಮಧ್ಯೆ ಇಂದು ಹಲವು ನಾಯಕರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಸಂಜೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಮಹಾರಾಷ್ಟ್ರದಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆ ಹಾಗೂ ಪಕ್ಷದ ಬಲದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿಂದೆ ಇರುವ ರಾಜ್ಯ ನಾಯಕರ ಪ್ರಯತ್ನ, ಹೋರಾಟ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಜನವಿರೋಧಿ ಅಲೆಯನ್ನು ಬಳಸಿಕೊಂಡ ವಿಧಾನದ ಕುರಿತು ಚರ್ಚಿಸಿದರು.
ಇದನ್ನೂ ಓದಿ :4 ಸಾವಿರ ಬಸ್‌ಗಳ ಖರೀದಿ, ಬೆಳಗಾವಿ ಜಿಲ್ಲೆಗೆ ಹೆಚ್ಚು ಹೊಸ ಬಸ್ ಬಿಡುತ್ತೇವೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಇದಾದ ಬಳಿಕ ಸಂಜೆ ಬ್ರಿಗೇಡ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಎಂ ಆರ್ ಜೈ ಶಂಕರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಸರ್ಕಾರಕ್ಕೆ ನಮ್ಮ ಸಹಕಾರ ಇರಲಿದೆ. ತಮ್ಮಿಂದಲೂ ಸಿಗಬೇಕಾದ ಸಹಕಾರದ ನಿರೀಕ್ಷೆಯನ್ನು ವಿವರಿಸಿದರು. ಕೈಗಾರಿಕೋದ್ಯಮಿಗಳು ಹೊಸ ಸರ್ಕಾರ ರಚನೆಯಾದಾಗ ಭೇಟಿಯಾಗಿ ಸಮಾಲೋಚಿಸುವುದು ವಾಡಿಕೆ. ಅದರಂತೆಯೇ ಹಲವು ವಾಣಿಜ್ಯೋದ್ಯಮಿಗಳು ಸರ್ಕಾರದ ಪ್ರಭಾವಿ ಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚಿಸುತ್ತಾರೆ. ಇಂದು ಬ್ರಿಗೇಡ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರ ಭೇಟಿ ಸಹ ಸೌಹಾರ್ದಯುತ ಭೇಟಿಯಾಗಿತ್ತು. ಅಲ್ಲದೆ, ಭಾನುವಾರ ರಾತ್ರಿ ಸಚಿವ ಶಿವಾನಂದ ಪಾಟೀಲ್ ಅವರು ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸೋಮವಾರ ರಾಮನಗರಕ್ಕೆ ಡಿಕೆಶಿ ಭೇಟಿ :ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾಳೆ (ಸೋಮವಾರ) ರಾಮನಗರಕ್ಕೆ ಭೇಟಿ ನೀಡಲಿದ್ದಾರೆ. ರಾಮನಗರದಲ್ಲಿ ನಡೆಯುವ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟು ಬೆಳಗ್ಗೆ 11ಕ್ಕೆ ರಾಮನಗರ ತಲುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಸಂಜೆ 3ಕ್ಕೆ ಅಲ್ಲಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರು ತಲುಪಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ :Guarantee scheme ಕೇಂದ್ರದಿಂದ ಅಕ್ಕಿ ಸಿಗದಿರೋದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ: ರಾಮಲಿಂಗಾರೆಡ್ಡಿ