ಬೆಂಗಳೂರು :ತಮಿಳುನಾಡಿಗೆ ಯಾಕೆ ನೀರು ಬಿಟ್ಟಿರಿ ಎಂದರೆ, ಬೀಗ ನಮ್ಮ ಬಳಿ ಇದೆಯೇ?, ರಾಜಕಾರಣ ಎಷ್ಟು ಮಾಡಬೇಕೋ ಅಷ್ಟು ಮಾಡಬೇಕು, ಜಾಸ್ತಿ ರಾಜಕಾರಣ ಮಾಡಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದು, ನಿಮಗೂ ಅರ್ಜಿ ಹಾಕಲು ಅವಕಾಶವಿದೆ, ಸುಪ್ರೀಂ ಕೋರ್ಟ್ಗೆ ಹೋಗಿ ಎಂದು ಪ್ರತಿಭಟನಾನಿರತ ರೈತರಿಗೂ ಪರೋಕ್ಷವಾಗಿ ಟಕ್ಕರ್ ಕೊಟ್ಟರು.
ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಯಾರ ನಿಯಂತ್ರಣದಲ್ಲಿದೆ, ನೀರು ಹರಿಸುವ ಜವಾಬ್ದಾರಿ ಯಾರ ಬಳಿ ಇದೆ. ಇದೆಲ್ಲ ನಾನು ಈಗ ಚರ್ಚೆ ಮಾಡುವುದಿಲ್ಲ. 30 ವರ್ಷ 40 ವರ್ಷದ ಲೆಕ್ಕ ಹಾಕಿದರೆ ಈ ವರ್ಷ ಮಳೆ ಕಡಿಮೆಯಾಗಿದೆ. ರೈತರಿಗೆ ಈ ಬಗ್ಗೆ ಮೊದಲೇ ತಿಳಿಸಿದ್ದೇವೆ. ಆದರೆ ಪ್ರತಿಭಟನೆ ಮಾಡುತ್ತಿದ್ದಾರೆ. ನೀರು ಬಿಡಬೇಡಿ ಎನ್ನುತ್ತಿದ್ದಾರೆ. ಕೋರ್ಟ್ ಕೇಳಬೇಕಲ್ಲ. ಅವರಿಗೂ ಕೋರ್ಟಿಗೆ ಹೋಗಲು ಅವಕಾಶವಿದೆ ಹೋಗಲಿ, ನಮಗೆ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ಹೋಗಲಿ, ಹಿಂದೆಲ್ಲ ಹೋರಾಟಗಳು ನಡೆದಿವೆ ಎಂದು ರೈತರನ್ನೇ ಕಾನೂನು ಹೋರಾಟ ನಡೆಸುವಂತೆ ತಿಳಿಸಿದರು.
ಸರ್ಕಾರ ಎಲ್ಲಾ ವಿಚಾರವನ್ನು ಗಮನಿಸಿ ಕೆಲಸ ಮಾಡಬೇಕು. ರಾಜ್ಯದ ಹಿತ ಹಾಗು ರೈತರ ಹಿತ ಕಾಪಾಡಲು ನಾನು ಸಚಿವನಾದ ನಂತರ ಎರಡು ಬಾರಿ ಬೆಳೆಗಳು ಹಾಳಾಗಬಾರದು ಎಂದು ನೀರು ಬಿಡಿಸಿದ್ದೇನೆ. ಈಗ ಸುಪ್ರೀಂ ಕೋರ್ಟ್ನಲ್ಲಿ ನಾವು ನಮ್ಮ ಕಾನೂನು ತಜ್ಞರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಬೇಕಲ್ಲ. ಅದಕ್ಕಾಗಿ ಕಾಯಬೇಕಿದೆ ಎಂದು ಡಿಸಿಎಂ ಹೇಳಿದರು.