ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಜನ ನಮಗೆ ಅಧಿಕಾರ ನೀಡಿರುವ ಕಾರಣ ನಾವು ಇಲ್ಲಿ ಕುಳಿತ್ತಿದ್ದೇವೆ. ಬಿಜೆಪಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ನಡೆ ಖಂಡಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಂದರ್ಭ, ಕಳೆದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಹಾಗೂ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಗಲೂ ನಾವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೆವು. ಆಗಲೂ ಡ್ಯಾನಿಶ್ ಅಲಿ ಸಮೇತ ಬಹುತೇಕ ಇದೇ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ನಾವು ಡ್ಯಾನಿಶ್ ಅಲಿಯನ್ನು ಪುಡಿಪುಕ್ಕ ಎಂದು ಕರೆಯಲು ಸಾಧ್ಯವೇ? ಈ ಬಾರಿ ಇವರೆಲ್ಲ ನಾಯಕರು ದೇಶವನ್ನು ಉಳಿಸಲು, ಭಾರತದ ಭವಿಷ್ಯ ಉಳಿಸಲು ಅವರದೇ ಆದ ಸಿದ್ಧಾಂತ ಇಟ್ಟುಕೊಂಡು ಆಗಮಿಸಿದ್ದಾರೆ. ರಾಜಕಾರಣದಲ್ಲಿ ಅವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅನಂತಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇತ್ತು. ಆಗಲೂ ಶಿಷ್ಟಾಚಾರ ಪಾಲನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರು ಕೇಳಿದಾಗಲೂ ಶಿಷ್ಟಾಚಾರ ಪಾಲನೆ ಮಾಡಿದ್ದೇವೆ. ಬಿಜೆಪಿಯವರು ಕೇಳಿದಾಗಲೂ ನಾವು ಶಿಷ್ಟಾಚಾರ ಪಾಲಿಸಿದ್ದೇವೆ. ಆಗ ಶಿಷ್ಟಾಚಾರ ಪಾಲಿಸಿದ್ದ ಅಧಿಕಾರಿಗಳೇ ಈಗಲೂ ಇದ್ದಾರೆ. ಬೇಕಿದ್ದರೆ ಆಗ ಯಾರಿಗೆಲ್ಲಾ ಶಿಷ್ಟಾಚಾರ ಪಾಲನೆ ಮಾಡಿದ್ದೆವು ಎಂದು ಪಟ್ಟಿ ನೀಡಬಲ್ಲೆ. ಇದರಲ್ಲಿ ವಿಶೇಷವಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಗೊಂದಲವಿದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಹಾಗೂ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೇ ಸದನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಅಪಮಾನವಿಲ್ಲ. ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೆಳಗಿನಿಂದ ಸಂಜೆವರೆಗೂ ಇಲ್ಲಿ ಡ್ರಾಮಾ, ನೃತ್ಯ, ಮಾತುಗಳು ಎಲ್ಲವನ್ನು ಮಾಡುತ್ತಿದ್ದಾರೆ. ಬಿಜೆಪಿಯ ಈ ಪ್ರಯತ್ನಕ್ಕೆ ಇಲ್ಲಿ ಸೊಪ್ಪು ಹಾಕುವವರು ಯಾರೂ ಇಲ್ಲ. ನಾವು ಇದಕ್ಕೆ ಬಗ್ಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ನಾವು ಸಿದ್ಧವಿದ್ದೇವೆ.