ಕರ್ನಾಟಕ

karnataka

ETV Bharat / state

ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ - ಗ್ರಾಮೀಣ ಶಾಲೆಗಳ ಗುಣಮಟ್ಟ

ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಸುಧಾರಣೆ ಬಗ್ಗೆ ಅರಮನೆ ಆವರಣದಲ್ಲಿ ನಡೆಯುತ್ತಿರುವ 26ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್

By ETV Bharat Karnataka Team

Published : Nov 29, 2023, 6:53 PM IST

Updated : Nov 29, 2023, 7:48 PM IST

ಬೆಂಗಳೂರು: ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಿಎಸ್ಆರ್ ನಿಧಿಯನ್ನು ಮೀಸಲಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

ಅರಮನೆ ಆವರಣದಲ್ಲಿ ನಡೆಯುತ್ತಿರುವ 26ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿಂದು ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಆ ಭಾಗದ ಮಕ್ಕಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುತ್ತದೆ. ಈ ಬಗ್ಗೆ ಅಜೀಂ ಪ್ರೇಮ್ ಜೀ ಸೇರಿದಂತೆ ಹಲವರ ಜತೆ ಚರ್ಚೆ ಮಾಡಿದ್ದು, ಈಗಾಗಲೇ 2 ಸಾವಿರ ಕೋಟಿ ಹಣವನ್ನು ಈ ಉದ್ದೇಶಕ್ಕೆ ನೀಡಲು ಅವರೆಲ್ಲಾ ಮುಂದಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಸೇರಿ ಈ ಕೆಲಸ ಮಾಡೋಣ, ಶಾಲೆಗಳ ಗುಣಮಟ್ಟ ಸುಧಾರಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸೋಣ ಎಂದು ಉದ್ಯಮಿಗಳಿಗೆ ಕರೆ ನೀಡಿದರು.

ಇನ್ನು ಟೆಕ್ ಸಮ್ಮಿಟ್​​ನಲ್ಲಿ ಫಿನ್​ಲ್ಯಾಡ್ ವಿಜ್ಞಾನ ಸಚಿವರಾದ ಸಾರಿ ಮುಲ್ತಾಲ ಮತ್ತು ಜರ್ಮನಿಯ ಡಿಜಿಟಲ್ ವ್ಯವಹಾರಗಳ ಸಚಿವ ಡಾಕ್ಟರ್ ವೋಲ್ಕರ್ ವಿಸ್ಸಿಂಗ್ ಅವರು ವಿಡಿಯೋ ಸಂದೇಶಗಳ ಮೂಲಕ ಭಾರತ ಹಾಗೂ ಕರ್ನಾಟಕ ಸರ್ಕಾರದ ಜೊತೆ ಹೆಚ್ಚಿನ ಸಹಭಾಗಿತ್ವಕ್ಕೆ ತಮ್ಮ ದೇಶಗಳು ಉತ್ಸುಕವಾಗಿವೆ ಎಂದರು. ಆದರೆ, ಸಾರಿ ಮುಲ್ತಾಲ ವಿಡಿಯೋ ಅಸ್ಪಷ್ಟವಾಗಿ ಪ್ರಸ್ತುತವಾದರೆ, ವೋಲ್ಕರ್ ವಿಸ್ಸಿಂಗ್ ವಿಡಿಯೋ ತಾಂತ್ರಿಕ ತೊಂದರೆಯಿಂದ ಪ್ಲೇ ಆಗಲೇ ಇಲ್ಲ. ನಂತರ ತಾಂತ್ರಿಕ ತೊಂದರೆ ಸರಿಪಡಿಸಿ ಪ್ರಸಾರ ಮಾಡಲಾಯಿತು. ಟೆಕ್ ಸಮ್ಮಿಟ್​ನಲ್ಲಿ ಈ ರೀತಿ ಆಗಿದ್ದು ಚರ್ಚೆಯನ್ನು ಹುಟ್ಟುಹಾಕಿತು.

ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ

ನಂತರ ಜೈವಿಕ‌ ತಂತ್ರಜ್ಞಾನ ಕುರಿತ ಕರಡು‌ ನೀತಿಯನ್ನು‌ ಬಿಡುಗಡೆ ಮಾಡಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​, ಕರ್ನಾಟಕವು ಬಹಳ ಹಿಂದಿನಿಂದಲೂ ಹೊಸತನ ಮತ್ತು ಬೆಳವಣಿಗೆಗೆ ಹೆಸರಾಗಿದೆ, ಸುಲಲಿತ ವಾಣಿಜ್ಯ-ವಹಿವಾಟು ಸೂಚ್ಯಂಕದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನದಲ್ಲಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ದೇಶದ ಐ.ಟಿ. ರಫ್ತಿನಲ್ಲಿ ಕರ್ನಾಟಕದ ಪಾಲು ಶೇ. 40ರಷ್ಟು ಇದೆ. ಸರ್ಕಾರವು ಕೈಗೊಳ್ಳಬಹುದಾದ ಕ್ರಮಗಳು ಯಾವುದಿರಬೇಕು ಎಂಬುದನ್ನು ತಿಳಿಯಲು ನಾವು ಉದ್ಯಮದ ಪ್ರಮುಖರು, ಅಕಾಡೆಮಿಕ್ ವಲಯದ ಪ್ರಮುಖರು ಹಾಗೂ ಸರ್ಕಾರದ ಪಾಲುದಾರರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

ಐ.ಟಿ. ಮತ್ತು ಬಿ.ಟಿ. ಸಚಿವ ಪ್ರಿಯಾಂಕ್ ಖರ್ಗೆ

ಐ.ಟಿ. ಮತ್ತು ಬಿ. ಟಿ. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯಪರಿಸರ ಉಂಟುಮಾಡಲು ಸರ್ಕಾರವು ಆದ್ಯತೆ ಮುಂದುವರಿಸಲಿದೆ ಎಂದು ಅಭಯ ನೀಡಿದರು.

ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು, ಕಳೆದ ವರ್ಷದಲ್ಲಿ ಐ.ಟಿ. ಉದ್ಯಮವು ಶೇ. 9ರಷ್ಟು ಬೆಳವಣಿಗೆ ಸಾಧಿಸಿದೆ. ಜಾಗತಿಕ ಆರ್ಥಿಕ ವ್ಯವಸ್ಥೆಯು ಮಂದಗತಿಯಲ್ಲಿದ್ದರೂ ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಈ ಉದ್ಯಮವು 350 ಬಿಲಿಯನ್ ಡಾಲರ್‌ ಬೆಳೆಯುವ ನಿರೀಕ್ಷೆ ಇದೆ ಎಂದರು. ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ರಾಜ್ಯವು ಹೊಂದಿರುವ ನಾಯಕತ್ವವನ್ನು ಕಾಯ್ದುಕೊಳ್ಳಬೇಕು ಎಂದಾದರೆ ಅದಕ್ಕೆ ಸೂಕ್ತವಾದ ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದ ಉದ್ಯಮ ವಲಯದ ಪ್ರಮುಖರಾದ ಎಎಂಡಿ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ ಮಾಸ್ಟರ್, ವಿಪ್ರೊ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಕಿರಣ್ ಮಜುಂದಾರ್ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ‌ ಶರ್ಮಾ, ಐಟಿ‌ ಕಾರ್ಯದರ್ಶಿ ಏಕ್ ರೂಪ್‌ ಕೌರ್, ಐಟಿ ನಿರ್ದೇಶಕ ದರ್ಶನ ಮತ್ತಿತರರು ಇದ್ದರು.

ಇದನ್ನೂ ಓದಿ:ಬೆಂಗಳೂರು ಅವ್ಯವಸ್ಥೆ ಸರಿಪಡಿಲು ಕೆಲ ಗಡಿಗಳನ್ನ ದಾಟಲೂ ಹಿಂಜರಿಯಲ್ಲ: ಡಿ.ಕೆ ಶಿವಕುಮಾರ್

Last Updated : Nov 29, 2023, 7:48 PM IST

ABOUT THE AUTHOR

...view details