ಬೆಂಗಳೂರು:ಇದೇ ತಿಂಗಳ 23ರಿಂದ ಶುರುವಾಗಲಿರುವ 'ಟೋಕಿಯೋ ಒಲಿಂಪಿಕ್ಸ್-2020' ಕ್ರೀಡಾಕೂಟದಲ್ಲಿನ ಭಾರತೀಯ ಆಟಗಾರರಿಗೆ ಉತ್ತೇಜನೆ ನೀಡುವ "ಚೀರ್ ಫಾರ್ ಇಂಡಿಯಾ" ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಕರೆ ನೀಡಿದರು.
'ಟೋಕಿಯೋ ಒಲಿಂಪಿಕ್ಸ್' ಕ್ರೀಡಾಕೂಟದಲ್ಲಿನ ಭಾರತೀಯ ಸ್ಫರ್ಧಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭಾರತೀಯ ದೈಹಿಕ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವೆಬಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, 15 ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಹಬ್ಬದಲ್ಲಿ ನಮ್ಮ ದೇಶದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.