ಕರ್ನಾಟಕ

karnataka

ETV Bharat / state

ಪಾರಂಪರಿಕ ಕಟ್ಟಡ ಜೀರ್ಣೋದ್ಧಾರ: ಡಿಸಿಎಂ ಅಶ್ವತ್ಥ ನಾರಾಯಣ ಭರವಸೆ - ಕಸಾಪ ಸಂಸ್ಥಾಪಕ ಅಧ್ಯಕ್ಷ ಎಚ್.‌ವಿ.ನಂಜುಂಡಯ್ಯ ಪಾರಂಪರಿಕ ಕಟ್ಟಡ

ಬೆಂಗಳೂರು ನಗರದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಡಿಸಿಎಂ ಜತೆ ಈ ಬಂಗಲೆಗೆ ಭೇಟಿ ನೀಡಿ ಅಲ್ಲಿನ ನಿರ್ಮಾಣ ಶೈಲಿಯನ್ನು ಕಂಡು ಚಕಿತರಾದರು.

DCM Ashwathanarayana Visits HV Nanjundayya Heritage Building
ಕಸಾಪ ಸಂಸ್ಥಾಪಕ ಅಧ್ಯಕ್ಷ ಎಚ್.‌ವಿ.ನಂಜುಂಡಯ್ಯ ಪಾರಂಪರಿಕ ಕಟ್ಟಡ

By

Published : Mar 16, 2021, 7:56 AM IST

ಬೆಂಗಳೂರು: ಕಸಾಪ ಸಂಸ್ಥಾಪಕ ಅಧ್ಯಕ್ಷ ಎಚ್.‌ವಿ.ನಂಜುಂಡಯ್ಯ ಪಾರಂಪರಿಕ ಕಟ್ಟಡ ಜೀರ್ಣೋದ್ದಾರ ಮಾಡಿ ಚಿರಸ್ಥಾಯಿಗೊಳಿಸಲಾಗುವುದು ಎಂದು ಡಿ.ಸಿ.ಎಂ ಅಶ್ವತ್ಥನಾರಾಯಣ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮೈಸೂರು ಸಂಸ್ಥಾನದಲ್ಲಿ ಹಂಗಾಮಿ ದಿವಾನರಾಗಿದ್ದ ಎಚ್.‌ವಿ.ನಂಜುಂಡಯ್ಯ ವಾಸವಿದ್ದ ಹಾಗೂ ತದ ನಂತರ ಮಲ್ಲೇಶ್ವರದ ಸರಕಾರಿ ಬಾಲಕಿಯರ ಪ್ರೌಢಶಾಲೆಗೆ ದಾನ ಮಾಡಿದ್ದ ಭವ್ಯ ಬಂಗಲೆಯನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಡಿಸಿಎಂ ಅಶ್ವತ್ಥ ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. ಬೆಂಗಳೂರು ನಗರದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಡಿಸಿಎಂ ಜತೆ ಈ ಬಂಗಲೆಗೆ ಭೇಟಿ ನೀಡಿ ಅಲ್ಲಿನ ನಿರ್ಮಾಣ ಶೈಲಿಯನ್ನು ಕಂಡು ಚಕಿತರಾದರು.

ನಗರದ ಪ್ರಮುಖ ಪಾರಂಪರಿಕ ಕಟ್ಟಡವಾಗಿರುವ ಈ ಬಂಗಲೆಯಲ್ಲಿ ನಂಜುಂಡಯ್ಯ ವಾಸವಿದ್ದರು. 1915ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಇದು "ಎಚ್‌ವಿಎನ್‌ ಬಂಗಲೆ" ಎಂದೇ ಪ್ರಖ್ಯಾತಿಯಾಗಿದೆ. ಕಟ್ಟಡ ಹಳತಾದಂತೆಲ್ಲ ಅದಕ್ಕೆ ಅಲ್ಲಲ್ಲಿ ಧಕ್ಕೆ ಉಂಟಾಗಿತ್ತು.

2 ಕೋಟಿ ರೂ. ವೆಚ್ಚ: "ಇಡೀ ನಗರಕ್ಕೆ ಹೆಮ್ಮೆ ತರುವ ಕಟ್ಟಡವಾಗಿದ್ದು ಮಲ್ಲೇಶ್ವರದಲ್ಲಿ ಇರುವುದು ನಮ್ಮ ಭಾಗ್ಯವೇ ಸರಿ. ಇದನ್ನ ಉಳಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಎಸ್ತೆಟಿಕ್‌ ಆರ್ಕಿಟೆಕ್ಟ್‌ ಸಂಸ್ಥೆಯವರು ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಬಿಬಿಎಂಪಿ 2 ಕೋಟಿ ರೂ. ಅನುದಾನ ನೀಡಿದ್ದು, ಕೆಲಸ ಭರದಿಂದ ಸಾಗುತ್ತಿದೆ" ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದರು.

ಹಳೆಯ ಅಥವಾ ಪಾರಂಪರಿಕ ಕಟ್ಟಡಗಳು ಎಂದರೆ ಜರ್ಮನ್ನರಿಗೆ ಅಚ್ಚುಮೆಚ್ಚು. ಅದಕ್ಕಾಗಿ ಬೆಂಗಳೂರಿನ ಜರ್ಮನ್‌ ಕಾನ್ಸುಲೇಟ್‌ ಜನರಲ್‌ ಆಗಿರುವ ಆಕ್ಚಿಮ್‌ ಬರ್ಕಾರ್ಟ್‌ ಹಾಗೂ ಮೈಸೂರು ರಾಜವಂಶಸ್ಥರಾದ ಯದುವೀರ್‌ ಕೃಷ್ಣರಾಜೇಂದ್ರ ಒಡೆಯರ್‌ ಸ್ಥಳಕ್ಕೆ ಆಗಮಿಸಿ ಬಂಗಲೆಯಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಣೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಇಡೀ ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸುವ ಕಾರ್ಯ ಇದಾಗಿದೆ ಎಂದು ಡಿಸಿಎಂ ಈ ಸಂದರ್ಭದಲ್ಲಿ ಹೇಳಿದರು.

ಚಕಿತರಾದ ಜರ್ಮನ್ನರು: ಈ ಬಂಗಲೆಯಲ್ಲಿ ಆ ಕಾಲಕ್ಕೆ ಬೃಹತ್‌ ಗಾತ್ರದ ಸೋನಾ ಬಾತ್‌ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಕಂಡು ಜರ್ಮನ್‌ ರಾಜತಾಂತ್ರಿಕರು ಚಕಿತರಾದರು. ಯದುವೀರ್‌ ಕೃಷ್ಣರಾಜೇಂದ್ರ ಒಡೆಯರ್‌ ಕೂಡ, ಪಾರಂಪರಿಕ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿಸುತ್ತಿರುವ ಡಿಸಿಎಂ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಇಂಥ ಅಪರೂಪದ ಕಟ್ಟಡಗಳನ್ನು ಉಳಿಸಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಓದಿ : ಸಿಡಿ ಬಗ್ಗೆ ಗೊತ್ತಿಲ್ಲ ಎನ್ನುತ್ತಿರುವ ಶಂಕಿತರು.. ಬ್ಯಾಂಕ್ ಖಾತೆ ಪರಿಶೀಲಿಸಲಿರುವ ಎಸ್ಐಟಿ

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ಈ ವರ್ಷಾಂತ್ಯಕ್ಕೆ ಕಾಮಗಾರಿ ಮುಗಿಯುತ್ತದೆ. ಈ ಕಟ್ಟಡವನ್ನು ಪುನರುಜ್ಜೀವನ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಕಾಮಗಾರಿ ಮುಗಿದ ಮೇಲೆ ಇಡೀ ಮಲ್ಲೇಶ್ವರಂವನ್ನು ಪ್ರತಿಬಿಂಬಿಸುವ ಮ್ಯೂಸಿಯಂ ರೀತಿಯಲ್ಲಿ ಇದನ್ನು ಅಭಿವೃದ್ಧಿ ಮಾಡಲಾಗುವುದು. ಆ ಮೂಲಕ ನಂಜುಂಡಯ್ಯ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details