ಕರ್ನಾಟಕ

karnataka

ETV Bharat / state

ಮಾರಕ ಕೊರೊನಾ ಧರ್ಮ, ಜಾತಿ ನೋಡ್ಕೊಂಡು ಬರಲ್ಲ: ಪಾದರಾಯನಪುರದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಎಂದ ಡಿಸಿಎಂ - ಪಾದರಾಯನಪುರ ಗಲಾಟೆ ಪ್ರಕರಣ

ಕೊರೊನಾ ಮಾರಕ ರೋಗವಾಗಿದ್ದು, ಇದು ಧರ್ಮ ಅಥವಾ ಜಾತಿ ನೋಡಿಕೊಂಡು ಬರಲ್ಲ. ವಿಶ್ವವೇ ಒಗ್ಗಟ್ಟಾಗಿರುವಾಗ ಬೇಜವಾಬ್ದಾರಿಯಾಗಿ ವರ್ತಿಸುವುದು ಸರಿಯಲ್ಲ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ರು.

DCM ashwath narayana statement
ಡಿಸಿಎಂ ಅಶ್ವತ್ಥ್ ನಾರಾಯಣ

By

Published : Apr 20, 2020, 6:38 PM IST

ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಅಹಿತಕರ ಘಟನೆಗೆ‌ ಕಾರಣರಾದವರ ವಿರುದ್ಧ, ಕಠಿಣ ಕಾನೂನು‌ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ನಡವಳಿಕೆ ಸಮಂಜಸವಲ್ಲ, ಉದ್ಧಟತನ ಮರೆದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕೊರೊನಾ ಮಾರಕ ರೋಗವಾಗಿದ್ದು, ಇದು ಧರ್ಮ ಅಥವಾ ಜಾತಿ ನೋಡಿಕೊಂಡು ಬರಲ್ಲ. ವಿಶ್ವವೇ ಒಗ್ಗಟ್ಟಾಗಿರುವಾಗ ಬೇಜವಾಬ್ದಾರಿಯಾಗಿ ವರ್ತಿಸುವುದು ಸರಿಯಲ್ಲ ಎಂದರು. ಈ ಘಟನೆಯನ್ನು ನಾನು ಖಂಡಿಸುತ್ತೇವೆ. ಈ ಕುರಿತಾಗಿ ಕ್ರಮ ಕೈಗೊಳ್ಳುತ್ತೇವೆ. ಇಂಥಹ ಘಟನೆ‌ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಗಲಭೆ ನಡೆದ ಪಾದರಾಯನಪುರ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಹೆಚ್ಚು ಪ್ರಕರಣ ದಾಖಲಾದ ಸ್ಥಳವಾಗಿದೆ ಎಂದು ಡಿಸಿಎಂ ಹೇಳಿದ್ರು.

ಮೊದಲ ಹಾಗೂ ಎರಡನೇ ಹಂತದ ಸಂಪರ್ಕ ಹೊಂದಿದವರನ್ನು ಬೇರೆಡೆ ವರ್ಗಾಯಿಸುವುದಾಗಿ ಮುಂಚಿತವಾಗಿ ತಿಳಿಸಲಾಗಿತ್ತು. ಅದಕ್ಕೆ ಅವರೂ ಒಪ್ಪಿದ್ದರು. ಉತ್ತಮ ರೀತಿ-ನೀತಿಯಲ್ಲಿ ವರ್ಗಾವಣೆ ಆಗಲಿ ಎಂದು ಅವರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿತ್ತು. ಆದ್ರೆ ಬೇಜವಾಬ್ದಾರಿಯಿಂದ ಕಾನೂನು ಕೈಗೆತ್ತಿಕೊಂಡಿದ್ದಾರೆ. ಆಸ್ತಿ ನಷ್ಟ, ಹಲ್ಲೆಯಾಗಿದೆ. ಆಗಾಗ ಇದು ಪರಿವರ್ತನೆ‌ ಆಗುತ್ತಿರುವುದು ಇರಿಸು ಮುರುಸು ಉಂಟುಮಾಡುತ್ತಿದೆ. ಸಮಾಜಕ್ಕೆ ಇವರ ನಿಲುವು ಸರಿ ಕಾಣುತ್ತಿಲ್ಲ ಅಶ್ವತ್ಥ್​ ನಾರಾಯಣ ಗುಡುಗಿದರು.

ಡಿಸಿಎಂ ಅಶ್ವತ್ಥ್ ನಾರಾಯಣ

ಸಮಾಜದ ಹಿತದೃಷ್ಟಿಯಿಂದ ಜನ ಮನೆಯಲ್ಲಿದ್ದು ಸಹಕರಿಸುತ್ತಿದ್ದು, ಅವರ ತ್ಯಾಗ ದೊಡ್ಡದು. ಆದರೆ‌ ಪಾದರಾಯನಪುರ ಘಟನೆಯನ್ನು ಯಾರೂ ಕೂಡ ಸಹಿಸುತ್ತಿಲ್ಲ. ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ಕೆಲ ದುಷ್ಕರ್ಮಿಗಳು ಕಿರುಕುಳ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ ಅನ್ನಿಸುತ್ತದೆ. ಶಾಸಕ ಜಮೀರ್ ಅಹ್ಮದ್ ತಿಳುವಳಿಕೆಯಿಲ್ಲದೇ ವರ್ತಿಸುತ್ತಿದ್ದಾರೆ. ಆಗಾಗ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸೂಕ್ತ ಸಮಯ‌ ಅವರು ತಿಳಿಸಬಹುದು. ಆದರೆ ಈಗ ದಿನದ 24 ಗಂಟೆ ಕಾರ್ಯ ನಿರ್ವಹಿಸುವಾಗ ಸಮಯ ನಿಗದಿ ಹೇಗೆ ಸಾಧ್ಯ? ಆರೋಗ್ಯ ರಕ್ಷಕರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರು ಅನುಮಾನ ಬರುವಂತೆ ನಡೆದುಕೊಳ್ಳಬಾರದು ಎಂದು ಜಮೀರ್​ ಅಹ್ಮದ್​ಗೆ ಡಿಸಿಎಂ ಸಲಹೆ ನೀಡಿದರು.

ಬಂಧಿತರ ವಿಚಾರಣೆ ನಡೆಯುತ್ತಿದ್ದು, ಅವರು ನೀಡುವ ಮಾಹಿತಿ ಆಧರಿಸಿ ಸತ್ಯ ಹೊರ ಬರಲಿದೆ. ಕಾರ್ಯ ಪಾಲನೆಗೆ ತೆರಳಿದ ಸರ್ಕಾರಿ ಅಧಿಕಾರಿಗಳು, ಯಾವುದೇ ಪ್ರಚೋದನೆ ನೀಡಲು ಹೋಗಿರಲಿಲ್ಲ ಎಂದರು. ಈ ಸಂದರ್ಭ ಗಲಭೆ ಅಗತ್ಯ ಇರಲಿಲ್ಲ, ಸರ್ಕಾರಿ ಅಧಿಕಾರಿಗಳ ಕಾರ್ಯಕ್ಕೆ ತಡೆವೊಡ್ಡಲಾಗಿದೆ. ಸಾರ್ವಜನಿಕ ವಾಹನ ಜಖಂಗೊಳಿಸಲಾಗಿದ್ದು, ಇಂಥವರನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಎಚ್ಚರಿಕೆ ರವಾನಿಸಿದ್ದಾರೆ.

ಉತ್ತರ ಪ್ರದೇಶ ಮಾದರಿಯಲ್ಲಿ ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಚಿಂತನೆ ಇದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಅದನ್ನೇ ಸಚಿವ ಸಿ.ಟಿ. ರವಿ ಕೂಡ ತಮ್ಮ ಮಾತಲ್ಲಿ‌ ವ್ಯಕ್ತಪಡಿಸಿದ್ದಾರೆ ಎಂದರು. ಕೇರಳ ಮಾದರಿ ಅಳವಡಿಸಿಕೊಂಡು ಗಲಾಟೆ ನಿಯಂತ್ರಿಸುತ್ತೇವೆ. ಎರಡು ವರ್ಷ ಶಿಕ್ಷೆ, ದಂಡ ವಿಧಿಸುತ್ತೇವೆ. ಮೇ 3 ರವರೆಗೆ ಯಥಾಸ್ಥಿತಿ ಲಾಕ್​​​ಡೌನ್ ಮುಂದುವರಿಯಲಿದೆ. ಒಂದು ವಾರದ ನಂತರ ಮತ್ತೆ ಸಭೆ ನಡೆಸಿ ತೀರ್ಮಾನಿಸುತ್ತೇವೆ. ಐಟಿ-ಬಿಟಿ ಕ್ಷೇತ್ರಕ್ಕೂ ಇದು ಅನ್ವಯವಾಗಲಿದೆ ಎಂದು ಅಶ್ವತ್ಥ್​ ನಾರಾಯಣ ಸ್ಪಷ್ಟಪಡಿಸಿದರು.

ABOUT THE AUTHOR

...view details