ಬೆಂಗಳೂರು: ತಮಿಳಿನ ಸಂತ ಕವಿ ತಿರುವಳ್ಳುವರ್ ಹಾಗೂ ಕನ್ನಡದ ಶ್ರೇಷ್ಠ ವಚನಕಾರ ಸರ್ವಜ್ಞರು ಕನ್ನಡ ಮತ್ತು ತಮಿಳಿಗರನ್ನು ಬೆಸೆದಿದ್ದು ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಕೊಡುಗೆ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದರು.
ಹಲಸೂರು ಬಳಿ ಇರುವ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾಗಿ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಮತ್ತು ತಮಿಳು ಭಾಷಿಗರ ಐಕ್ಯತೆಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ವರ್ಷಗಳಿಂದ ಜಟಿಲವಾಗಿದ್ದ ಈ ಸಮಸ್ಯೆಯನ್ನು 11 ವರ್ಷಗಳ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ತಿರುವಳ್ಳುವರ್ ಪ್ರತಿಮೆ ಅನಾವರಣಗೊಂಡಿತು. ಅಂದೇ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಸ್ಥಾಪನೆಯಾಯಿತು. ಎರಡು ರಾಜ್ಯಗಳ ನಡುವೆ ಇದೊಂದು ಐತಿಹಾಸಿಕ ಘಟನೆಯಾಯಿತು ಎಂದರು.
ತಮ್ಮ ಸಾಹಿತ್ಯ, ಬರವಣಿಗೆ ಹಾಗೂ ತತ್ತ್ವಾದರ್ಶಗಳ ಮೂಲಕ ಸಮಾನತೆಯನ್ನು ಸಾರಿದ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿ ಅತ್ಯಂತ ಮಹತ್ವದ್ದಾಗಿದೆ. ಅದರ ಸಾರ ಎಲ್ಲರಿಗೂ, ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ ಎಂದು ಉಪ ಮುಖ್ಯಮಂತ್ರಿ ಬಣ್ಣಿಸಿದರು.