ಬೆಂಗಳೂರು:ನಗರದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (IGICH)ನಲ್ಲಿ ಕಾಗ್ನಿಜೆಂಟ್ ಫೌಂಡೇಶನ್ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 100 ಹಾಸಿಗೆಗಳ ಮಕ್ಕಳ ತೀವ್ರ ನಿಗಾ ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಇಂದು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಮಕ್ಕಳಿಗಾಗಿಯೇ ಇಂತಹ ಅತ್ಯುತ್ತಮ ಐಸಿಯು ಸಿದ್ಧಪಡಿಸಲು ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಿದ ಕಾಗ್ನಿಜೆಂಟ್ ಸಂಸ್ಥೆಗೆ ಅಭಿನಂದನೆಗಳು. 1.32 ಕೋಟಿ ರೂ. ವೆಚ್ಚದಲ್ಲಿ ಐಸಿಯು ಸೌಲಭ್ಯವನ್ನು ಅಭಿವೃದ್ಧಿಪಡಿಲಾಗಿದೆ. ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಈಗ 30ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್-19 ಸೋಂಕಿಗೆ ತುತ್ತಾಗುವ ಶಿಶುಗಳಿಗೆ ಮತ್ತು ಮಕ್ಕಳಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗಲಿದೆ. ಮಕ್ಕಳಿಗೆ ಅಗತ್ಯವಾದ ಪಿಪಿಇ ಕಿಟ್‌ಗಳು, ಆಕ್ಸಿಜನ್ ಬೆಡ್‌ಗಳು, ವೆಂಟಿಲೇಟರ್‌ಗಳು, ಮಲ್ಟಿ ಪ್ಯಾರಾಮಾನಿಟರ್‌ಗಳು ಸೇರಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಜ್ಯ ಸರ್ಕಾರವು ಸೋಂಕಿನ ಕಾಯಿಲೆ ಹತ್ತಿಕ್ಕಲು ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಮೂರನೇ ಅಲೆ ತಡೆಯುವುದಕ್ಕೆ ಸಾಧ್ಯವಾದ ಸರ್ವ ಉಪ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೋಕಾ ಕೋಲಾ ಫೌಂಡೇಶನ್ ಮತ್ತು ಯುನೈಟೆಡ್ ವೇ ಸಹಯೋಗದಲ್ಲಿ ರಾಜ್ಯ ಸರ್ಕಾರದ ಜತೆಗೂಡಿ ಹಮ್ಮಿಕೊಂಡಿರುವ ʼಸೋಂಕು ಹರಡುವುದನ್ನು ನಿಲ್ಲಿಸಿʼ ಎಂಬ ಕೋವಿಡ್ ಲಸಿಕೆ ಜಾಗೃತಿ ಅಭಿಯಾನಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಂಗಳವಾರ ಚಾಲನೆ ನೀಡಿದರು.