ಬೆಂಗಳೂರು: ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರಚಾರದ ಮಧ್ಯೆ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಾಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.
ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನ. ಸ್ವಾಮಿ ಅಯ್ಯಪ್ಪ ಆಡಿ ಬೆಳೆದ ಜಾಗವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿದೆ ಎಂದು ದರ್ಶನದ ನಂತರ ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಂಜೆ ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಸನ್ನಿಧಾನಕ್ಕೆ ಆಗಮಿಸಿದರು. ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ್ಯ ಸಾಂಪ್ರದಾಯಿಕ ಪಡಿಪೂಜೆಯಲ್ಲಿ ಭಾಗಿ, ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇಗುಲದ ಮುಖ್ಯ ತಂತ್ರಿ ರಾಜೀವ ಕಂದರಾರು ಹಾಗೂ ಮೇಲ್‌ಶಾಂತಿ ಅವರಾದ ವಿ.ಕೆ.ಜಯರಾಜ್ ಪೋಟ್ರಿ ಅಶ್ವತ್ಥ ನಾರಾಯಣ ಅವರಿಗಾಗಿ ಪೂಜೆ ನೆರವೇರಿಸಿಕೊಟ್ಟು ಪವಿತ್ರವಾದ ಎಲೆ ಪ್ರಸಾದ ನೀಡಿದರು. ಅಶ್ವತ್ಥ ನಾರಾಯಣ ಅವರು ಸ್ವಾಮಿಯ ಸನ್ನಿಧಾನದ ಸ್ವರ್ಣ ಮೆಟ್ಟಿಲು ಮುಂದೆ ನಿಂತು ಇರುಮುಡಿ ಸಮರ್ಪಿಸಿದರು.