ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ: ಅಶ್ವತ್ಥ್​ ನಾರಾಯಣ್​​​ ವಿಶ್ವಾಸ - PM narendra modi

ಗಾಂಧಿನಗರದಲ್ಲಿರುವ ಉನ್ನತ ಶಿಕ್ಷಣ ಪರಿಷತ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್​, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ

By

Published : Oct 24, 2019, 4:01 PM IST

ಬೆಂಗಳೂರು:ಮಹಾರಾಷ್ಟ್ರದಲ್ಲಿ ಸರಳ ಬಹುಮತದ ಸರ್ಕಾರ ರಚನೆಯ ಜೊತೆಗೆ ಹರಿಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಾಂಧಿನಗರದಲ್ಲಿರುವ ಉನ್ನತ ಶಿಕ್ಷಣ ಪರಿಷತ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಜ್ಯದಲ್ಲಿ ದೊಡ್ಡಮಟ್ಟದ ಬಹುಮತದ ಸರ್ಕಾರ ರಚನೆ ಬಯಸಿದ್ದೆವು. ಆದರೆ ಮಹಾರಾಷ್ಟ್ರದಲ್ಲಿ ಸರಳ ಬಹುಮತದ ಸರ್ಕಾರ ರಚಿಸುತ್ತಿದ್ದು, ಹರಿಯಾಣದಲ್ಲಿ ಸರಳ ಬಹುಮತಕ್ಕೆ ಸಂಖ್ಯೆ ಕೊರತೆ ಎದುರಾಗಿದೆ. ಯಾರಿಗೂ ಬಹುಮತ ಇಲ್ಲ. ಅಲ್ಲಿ ನಮ್ಮದು ಅತಿದೊಡ್ಡ ಪಕ್ಷ. ಹಾಗಾಗಿ ಮೈತ್ರಿ ಮಾಡಿಕೊಂಡು ಹರಿಯಾಣದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ ಎಂದರು.

ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕಡಿಮೆಯಾಗುತ್ತಿರುವ ಸೂಚನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ಸೋಲುತ್ತಿದ್ದಾರೆ. ನಾವು ಸರ್ಕಾರ ರಚನೆ ಮಾಡುತ್ತಿದ್ದೇವೆ. ನಮ್ಮ ಜನಪ್ರಿಯತೆ ಹೆಚ್ಚಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಬಗ್ಗೆ ಒಲವಿದೆ. ಕಾಂಗ್ರೆಸ್ ತಮ್ಮ ಬಗ್ಗೆ ಹೆಚ್ಚಿನ ಗಮನಹರಿಸಿಕೊಂಡು ಆ ಕೆಲಸದಲ್ಲಿ ತೊಡಗಿದರೆ ಅವರಿಗೂ ಒಳ್ಳೆಯದು ಎಂದರು.

ಕಾಂಗ್ರೆಸ್ ಪಕ್ಷದ ಮೇಲೆ ರಾಜ್ಯದ ಜನರಿಗೆ ಭರವಸೆ ಇಲ್ಲದ ಈ ಕಾಲದಲ್ಲಿ ಭರವಸೆಯನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ಇದ್ದಾರೆ. ಹೆಚ್ಚಿನ ಬೆಂಬಲ ಗಳಿಸುವ ನಿಟ್ಟಿನಲ್ಲಿ ಭರವಸೆ, ಕಲ್ಪನೆ, ಚಿಂತನೆ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಮುಗಿದ ಅಧ್ಯಾಯ ಎಂದು ತಿರುಗೇಟು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಇನ್ನೊಬ್ಬರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಅವರ ಚಿಂತನೆಯ ಗುಣಮಟ್ಟ ಹಾಗೂ ಅವರು ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಹೀಯಾಳಿಸುವ ಹೇಳಿಕೆ ನೀಡುವುದು ಯಾವ ಪಕ್ಷದ ನಾಯಕರಿಗೂ ಗೌರವ ತರುವುದಿಲ್ಲ ಎಂದರು.

ABOUT THE AUTHOR

...view details