ಬೆಂಗಳೂರು : ಕ್ಷೇತ್ರದಲ್ಲಿ ಜಾತಿ ಮೀರಿದ ರಾಜಕೀಯ ಇದೆ. ಜಾತಿ ಮೀರಿ ಕೆಲಸ ಮಾಡೋರು ಮುನಿರತ್ನ ಅವರು. ಡಿಕೆಶಿ, ಹೆಚ್ಡಿಕೆ, ಡಿಕೆಸು ಪ್ರಭಾವ ಈ ಕ್ಷೇತ್ರದಲ್ಲಿ ನಡೆಯಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಟಾಂಗ್ ನೀಡಿದ್ದಾರೆ.
ಆರ್.ಆರ್.ನಗರದಲ್ಲಿ ಮಾತನಾಡಿದ ಅವರು, ಮುನಿರತ್ನ ಇಲ್ಲಿ ಹೊಸಬರಲ್ಲ, ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಮುನಿರತ್ನ ಕೆಂಪೇಗೌಡರ ಪ್ರೇರಣೆ ಪಡೆದು ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದಾರೆ. ಮುನಿರತ್ನ ಈ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಆರ್.ಆರ್. ನಗರಕ್ಕೆ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಬಂದ್ರು ಏನೂ ಆಗದು. ಅವರು ಬಂದು ಸುಮ್ನೆ ಹೋಗಬೇಕು ಅಷ್ಟೇ. ಇಲ್ಲಿ ಜನರ ಜತೆ ಇದ್ದು ಕೆಲಸ ಮಾಡೋರು ಬೇಕು. ಅದು ಮುನಿರತ್ನ ಮಾತ್ರ ಎಂದು ತಿಳಿಸಿದರು. ಮುನಿರತ್ನ ಎರಡು ಸಲ ಶಾಸಕರಾಗಿ ಉತ್ತಮ ಸಾಧನೆ, ಜನಪರ ಕೆಲಸ ಮಾಡಿದ್ದಾರೆ. ಇಡೀ ಕ್ಷೇತ್ರ ಪಕ್ಷಾತೀತವಾಗಿ ಮುನಿರತ್ನ ಪರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.