ಕರ್ನಾಟಕ

karnataka

By

Published : Sep 2, 2020, 5:59 PM IST

ETV Bharat / state

ಉಪ ಕುಲಪತಿಗಳು ಕಂಫರ್ಟ್‌ ಝೋನ್‌ ಬಿಟ್ಟು ಕೆಲಸ ಮಾಡಬೇಕು : ಡಿಸಿಎಂ ಅಶ್ವತ್ಥ್‌ ನಾರಾಯಣ್

ಕರ್ನಾಟಕವು ಶೈಕ್ಷಣಿಕವಾಗಿ ಜಾಗತಿಕ ಪೈಪೋಟಿ ನಡೆಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಜಾರಿಯನ್ನೇ ಒಂದು ಸವಾಲಾಗಿ ಸ್ವೀಕರಿಸಿ ಉಪ ಕುಲಪತಿಗಳೆಲ್ಲರೂ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಗೋಚರವಾಗಲಿವೆ..

Meeting
Meeting

ಬೆಂಗಳೂರು :ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು. ಮೊದಲು ಉಪ ಕುಲಪತಿಗಳು ಕಂಫರ್ಟ್‌ ಝೋನ್‌ನಿಂದ ಹೊರ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್‌ ನಾರಾಯಣ ಕಿವಿಮಾತು ಹೇಳಿದ್ದಾರೆ.

ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಎಲ್ಲಾ ವಿವಿಗಳ ಉಪ ಕುಲಪತಿಗಳ ಜೊತೆ ರಾಜ್ಯಪಾಲ ವಜೂಭಾಯಿ ವಾಲ ಅವರು ರಾಜಭವನದಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಈ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ರಾಜಿ ಇಲ್ಲದ ಬದ್ಧತೆ ಹೊಂದಿದೆ. ಅದನ್ನು ಅನುಷ್ಠಾನ ತರುವುದಕ್ಕೆ ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಾರಿಗೆ ನೀಲನಕ್ಷೆ ಸಿದ್ಧಪಡಿಸುತ್ತಿರುವ ಕಾರ್ಯಪಡೆ ವರದಿ ನೀಡಿದ ಕೂಡಲೇ ಅನುಷ್ಠಾನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ರಾಜ್ಯ ಮಾತ್ರವಲ್ಲ, ಇಡೀ ದೇಶದ ದಿಕ್ಸೂಚಿಯನ್ನೇ ಬದಲಾವಣೆ ಮಾಡಬಲ್ಲ ಶಕ್ತಿ ಹೊಂದಿರುವ ಶಿಕ್ಷಣ ನೀತಿ ಜಾರಿಯಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದ ಸ್ವರೂಪವನ್ನೇ ಬದಲು ಮಾಡಬಲ್ಲ ನೀತಿಯನ್ನು ಜಾರಿ ಮಾಡಲು ನೀವು ಬಹಳಷ್ಟು ಸಿದ್ಧತೆ ಮಾಡಿಕೊಂಡು ಯೋಜನಾಬದ್ಧವಾಗಿ ಮುಂದುವರಿಯಬೇಕಾಗುತ್ತದೆ. ಸಿಬ್ಬಂದಿ ನೇಮಕಾತಿ ಸೇರಿ ವಿವಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ತಯಾರಿದೆ ಎಂದು ಉಪ ಕುಲಪತಿಗಳಿಗೆ ಡಿಸಿಎಂ ವಿವರಿಸಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೀತಿಯನ್ನು ಯಾವ ರೀತಿ ಜಾರಿ ಮಾಡಬೇಕು ಎಂಬುದಕ್ಕೆ ಸರ್ಕಾರವೇ ಒಂದು ರೋಡ್‌ಮ್ಯಾಪ್‌ ನೀಡಲಿದೆ. ಆದರ ಆಧಾರದ ಮೇಲೆ ಉಪ ಕುಲಪತಿಗಳು ಕೆಲಸ ಮಾಡಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವೂ ಇರುತ್ತದೆ ಎಂದ ಡಿಸಿಎಂ, ಸಂಶೋಧನೆ ಮತ್ತು ಬೋಧನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವಿವಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಬಹ ವಿಷಯಾಧಾರಿತ ಬೋಧನೆ ಮಾಡುವ ನಿಟ್ಟಿನಲ್ಲಿ ಶಕ್ತಿ ತುಂಬಲಾಗುವುದು ಎಂದರು.

ಬೆಂಗಳೂರು ಶಿಕ್ಷಣದ ಹಬ್ :ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ವೇಗವಾಗಿ ದಾಪುಗಾಲಿಡುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ಅತ್ಯಂತ ಪ್ರಮುಖ ಶಿಕ್ಷಣದ ಹಬ್‌ ಆಗಿ ಹೊರ ಹೊಮ್ಮುತ್ತಿದೆ. ವೈದ್ಯಕೀಯ, ತಾಂತ್ರಿಕ, ಎಂಜಿನಿಯರಿಂಗ್‌ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ನಂ.1 ಆಗಿದೆ. ಶಿಕ್ಷಣ ನೀತಿ ಜಾರಿ ಮಾಡುವುದರಿಂದ ವಿಶ್ವವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಲಿವೆ. ಅದಕ್ಕೆ ಬೇಕಾದ ಸಿಬ್ಬಂದಿಯನ್ನೂ ಸರ್ಕಾರ ಒದಗಿಸುವ ಭರವಸೆ ಇದೆ ಎಂದು ರಾಜ್ಯಪಾಲ ವಜೂಭಾಯಿ ವಾಲ ಇದೇ ವೇಳೆ ಹೇಳಿದರು.

ಕರ್ನಾಟಕವು ಶೈಕ್ಷಣಿಕವಾಗಿ ಜಾಗತಿಕ ಪೈಪೋಟಿ ನಡೆಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಜಾರಿಯನ್ನೇ ಒಂದು ಸವಾಲಾಗಿ ಸ್ವೀಕರಿಸಿ ಉಪ ಕುಲಪತಿಗಳೆಲ್ಲರೂ ಕೆಲಸ ಮಾಡಬೇಕು ಎಂದ ರಾಜ್ಯಪಾಲರು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಗೋಚರವಾಗಲಿವೆ ಎಂದರು.

ಸ್ವಾಯತ್ತತೆ ಬೇಕೆಂದ ಉಪ ಕುಲಪತಿಗಳು :ವಿಶ್ವವಿದ್ಯಾಲಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಾಗೂ ಶಿಕ್ಷಣ ನೀತಿಯನ್ನು ಉತ್ತಮವಾಗಿ ಜಾರಿ ಮಾಡಲು ನೆರವಾಗುವ ನಿಟ್ಟಿನಲ್ಲಿ ವಿವಿಗಳಿಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಉಪ ಕುಲಪತಿಗಳು ತಮ್ಮ ಅಭಿಪ್ರಾಯ ವ್ಕಕ್ತಪಡಿಸಿದರು.

ಜೊತೆಗೆ ವಿವಿಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕು. ಗುಣಮಟ್ಟದ ಬೋಧನೆಗೆ ಅಗತ್ಯವಾದ ಎಲ್ಲಾ ಸಹಕಾರವನ್ನು ಸರ್ಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯರು ಆಗಿದ್ದ ಅಜೀಂ ಪ್ರೇಮ್‌ಜೀ ವಿವಿ ಉಪ ಕುಲಪತಿ ಅನುರಾಗ್‌ ಬೇಹರ್‌ ಅವರು ನೀತಿಯ ಕುರಿತು ಎಲ್ಲಾ ಕುಲಪತಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಸಭೆಯಲ್ಲಿ ವಿಟಿಯು ಉಪ ಕುಲಪತಿ ಪ್ರೊ. ಕರಿಸಿದ್ಧಪ್ಪ ಸೇರಿ ವಿವಿಧ ವಿವಿಗಳ 27 ಉಪ ಕುಲಪತಿಗಳು ಹಾಜರಿದ್ದರು.

ABOUT THE AUTHOR

...view details