ಬೆಂಗಳೂರು: ಸಿಎಂ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆಯನ್ನು ಸಮರ್ಥವಾಗಿ ಮಾಡುತ್ತಿದ್ದೇವೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇಡೀ ಸಮಾಜ ಕೋವಿಡ್ ಸೋಂಕಿನ ನಿಯಂತ್ರಣದಲ್ಲಿ ತೊಡಗಿದೆ. ಇದು ವೇಗವಾಗಿ ಹಬ್ಬುತ್ತಿದೆ. ಬೇಡಿಕೆ ಪೂರೈಸಲು ಸಿಎಂ ಬಿಎಸ್ವೈ ನಾಯಕತ್ವದಲ್ಲಿ ಬಹಳಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿ ಕಾರ್ಯಕರ್ತರು ಕೋವಿಡ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 70,000 ಬೆಡ್ಗಳು ನಿಗದಿಯಾಗಿವೆ. ಸರ್ಕಾರದ ಮೂಲಕ 35,000 ಬೆಡ್ ನೀಡಲಾಗುತ್ತಿದೆ. 50,000ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ಗಳಿವೆ. 970 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಒಟ್ಟು 1200 ಮೆಟ್ರಿಕ್ ಟನ್ ರಾಜ್ಯಕ್ಕೆ ಹಂಚಿಕೆ ಮಾಡಲು ಕೋರ್ಟ್ ನಿರ್ದೇಶನ ನೀಡಿದೆ. ಇನ್ನೂ 10,000 ಬೆಡ್ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಿಸಿಸಿ ಕೇಂದ್ರವನ್ನೂ ನಿರ್ಮಿಸುತ್ತಿದ್ದೇವೆ. ಅಲ್ಲೂ ಆಕ್ಸಿಜನ್ ಬೆಡ್ ಪೂರೈಕೆ ಮಾಡುತ್ತೇವೆ. ರೆಮ್ಡಿಸಿವಿರ್ಗೆ ಸಾಕಷ್ಟು ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಸುಮಾರು 1.50 ಲಕ್ಷ ಆರ್ಟಿಪಿಸಿಆರ್ ಟೆಸ್ಟ್ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿದೆ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ಗಳನ್ನು ಮಾಡುತ್ತಿದ್ದೇವೆ. ಇದನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡುತ್ತೇವೆ. 24 ಗಂಟೆ ಒಳಗೆ ಈ ಆರ್ಪಿಸಿಆರ್ ರಿಪೋರ್ಟ್ ಕೊಡಬೇಕು. ಇದನ್ನು ಕೆಲವು ಗಂಟೆಗಳಲ್ಲಿ ಕೊಡುವ ಕೆಲಸ ಆಗುತ್ತಿದೆ. ಕೋವಿಡ್ ಲಕ್ಷಣಗಳು ಮೀರಿ ಜೀವಕ್ಕೆ ಅಪಾಯ ಆಗುತ್ತಿದೆ. ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಔಷಧ, ಮಾತ್ರೆಗಳನ್ನು ಸಂಪೂರ್ಣವಾಗಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಎಂದರು.