ಬೆಂಗಳೂರು:ಬಿಬಿಎಂಪಿ ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಶ್ಚಿಮ ವಲಯ ಕೋವಿಡ್ ಉಸ್ತುವಾರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಎಲ್ಲ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಸಚಿವಾರಾದ ಕೆ.ಗೋಪಾಲಯ್ಯ, ಶಾಸಕರಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಮುಖ್ಯ ಆಯುಕ್ತರು ಗೌರವ್ ಗುಪ್ತಾ, ವಲಯ ಸಂಯೋಜಕರು ಉಜ್ವಲ್ ಘೋಷ್, ವಲಯ ಆಯುಕ್ತರು ಬಸವರಾಜು, ಜಂಟಿ ಆಯುಕ್ತರು ಶಿವಸ್ವಾಮಿ ಭಾಗಿಯಾಗಿದ್ದರು.
ಸೋಂಕು ಲಕ್ಷಣಗಳಿರುವವರು ತ್ವರಿತವಾಗಿ ಟೆಸ್ಟ್ ಮಾಡಿಸಿಕೊಳ್ಳುವ, ಐಸೋಲೇಷನ್ನಲ್ಲಿರುವವರಿಗೆ ಮೆಡಿಕಲ್ ಕಿಟ್ ನೀಡುವ, ತಡವಾಗಿ ಸ್ವಾಬ್ ಫಲಿತಾಂಶ ನೀಡುವ ಲ್ಯಾಬ್‌ಗಳಿಗೆ 24 ಗಂಟೆಯೊಳಗಾಗಿ ಫಲಿತಾಂಶ ನೀಡಲು ಸೂಚಿಸುವ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್ ಹಾಸಿಗೆಗಳನ್ನು ವ್ಯವಸ್ಥೆ ಮಾಡುವ, ಸಹಾಯವಾಣಿ ಸಂಖ್ಯೆಯನ್ನು ಸದೃಢಗೊಳಿಸುವುದು ಸೇರಿದಂತೆ ಆರೋಗ್ಯ ವ್ಯವಸ್ಥೆ ಸರಿಪಡಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ನಗರದಲ್ಲಿ ಹಾಸಿಗೆ ಲಭ್ಯತೆ, ಆ್ಯಂಬುಲೆನ್ಸ್ , ಶವ ಸಾಗಾಣೆ ವಾಹನ, ಐಸೋಲೇಟ್‌ನಲ್ಲಿರುವವರ ಮೇಲೆ ನಿಗಾವಹಿಸುವುದು ಸೇರಿದಂತೆ ಸಹಾಯವಾಣಿ ಸಂಖ್ಯೆ ಮೂಲಕ ನಡೆಯುವ ಕಾರ್ಯಚಟುವಟಿಕೆಗಳು ಸರಿಯಾಗಿ ನಡೆಯಬೇಕು. ಬೂತ್ ಮಟ್ಟದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರ ಸಿಬ್ಬಂದಿ ಸಂಪರ್ಕಿತರನ್ನು ಪತ್ತೆ ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಬೇಕು. ಪಶ್ಚಿಮ ವಲಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೂಡಲೇ ಎಲ್ಲ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಸೋಂಕು ತಡೆಯಬೇಕು ಎಂದು ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ಅವಶ್ಯಕ ಔಷಧಗಳು ಸಂಗ್ರಹಿಸಿಟ್ಟುಕೊಂಡಿರಬೇಕು. ಕೋವಿಡ್ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಾನ್ಸಿಟ್ ಸೆಂಟರ್‌ಗಳನ್ನು ಮಾಡಲು ಕ್ರಮವಹಿಸಬೇಕು. ಆಕ್ಸಿಜನ್, ರೆಮ್ಡೆಸಿವಿರ್ ತ್ವರಿತವಾಗಿ ಸಿಗುವಂತೆ ವ್ಯಸಸ್ಥೆ ಮಾಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆ ನೀಡದಿದ್ದರೆ ಕೂಡಲೆ ಹಾಸಿಗೆ ವಶಪಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟು ಐಸೋಲೇಟ್ ಆಗಿರುವವರಿಗೆ ಮೆಡಿಕಲ್ ಕಿಟ್ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.