ಬೆಂಗಳೂರು: ದಿವ್ಯಾಂಗರ ಕಲ್ಯಾಣ, ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮುಂಗಡ ಪತ್ರದಲ್ಲಿ ಹಂಚಿಕೆಯಾಗಿರುವ ಶೇ.4ರಷ್ಟು ಅನುದಾನವನ್ನು ಸದ್ಭಳಕೆ ಮಾಡಲು ಎಲ್ಲ ಕ್ರಮ ವಹಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ದಿವ್ಯಾಂಗರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ʼಸಕ್ಷಮʼ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ದಿವ್ಯಾಂಗರ ರಾಷ್ಟ್ರೀಯ ಕೋವಿಡ್ ಸಹಾಯವಾಣಿಗೆ ಚಾಲನೆ ನೀಡಿದ ನಂತರ ಮಾತನಾಡಿದ್ರು. ಎಲ್ಲ ದಿವ್ಯಾಂಗರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು. ಎಲ್ಲರೂ ತಪ್ಪದೇ ಪಡೆದುಕೊಳ್ಳಬೇಕು. ಪಡೆದುಕೊಳ್ಳದೇ ಇರುವವರಿಗೆ ವಿತರಿಸುವ ಕಾರ್ಯಕ್ರಮವನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು. ಆರೋಗ್ಯ, ವಸತಿ ಇತ್ಯಾದಿಗಳಿಗೆ ಬಿಪಿಎಲ್ ಕಾರ್ಡ್ ಹೆಚ್ಚು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ದಿವ್ಯಾಂಗರ ನೆರವಿಗೆ ಪ್ರತಿಯೊಬ್ಬರೂ ಧಾವಿಸಲೇಬೇಕು. ನಮ್ಮ ಆದ್ಯತೆಗಳಲ್ಲಿ ಮೊತ್ತ ಮೊದಲ ಸ್ಥಾನ ಇವರೇ ಆಗಿರಬೇಕು. ಸರ್ಕಾರವೂ ಇದನ್ನೇ ನಂಬಿ ಕೆಲಸ ಮಾಡುತ್ತಿದೆ ಎಂದ್ರು. ದಿವ್ಯಾಂಗರಿಗೆ ಮನೆ, ನಿವೇಶನ, ಆರೋಗ್ಯ ಸೇವೆ ಸೇರಿದಂತೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲು ಕ್ರಮ ಕೈಗೊಂಡಿದೆ. ಅಗತ್ಯ ಅನುದಾನವನ್ನೂ ನೀಡಿದೆ. ಅಲ್ಲದೇ, ದಿವ್ಯಾಂಗರ ಕಲ್ಯಾಣಕ್ಕಾಗಿ ರೂಪಿಸಿರುವ ಎಲ್ಲ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.