ಬೆಂಗಳೂರು:ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಕೊಡಿಸಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ-ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಪರಿಶ್ರಮದಿಂದ ಕೆಜಿಎಫ್‌ನಲ್ಲಿ ಜೀರ್ಣೋದ್ಧಾರ ಮಾಡಲಾದ ಬಿಜಿಎಂಎಲ್ ಆಸ್ಪತ್ರೆಯ ವರ್ಚುಯಲ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿಸಿಎಂ, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಲಸಿಕೆ ಕೊರತೆ ವಿಷಯವನ್ನು ತಿಳಿಸಿದರು. ಒಂದೆಡೆ ಕೋವಿಡ್ ಸೋಂಕಿತರನ್ನು ಪತ್ತೆ ಮಾಡುತ್ತಾ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ವ್ಯಾಕ್ಸಿನೇಷನ್ ಕೂಡ ಸಾಗುತ್ತಿದೆ. ಎರಡನೇ ಅಲೆ ತೀವ್ರವಾಗಿರುವ ಈ ಸಂದರ್ಭದಲ್ಲಿ ಲಸಿಕೆ ಬಹಳ ಅಗತ್ಯವಾಗಿದೆ. ಲಸಿಕೆಯು ಜನರನ್ನು ಉಳಿಸಲಿದೆ ಮಾತ್ರವಲ್ಲದೆ, ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸುತ್ತಿದೆ ಎಂದರು.
ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಕೂಡಲೇ ಈ ಬಗ್ಗೆ ಸಂಬಂಧಟ್ಟ ಸಚಿವರು, ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.
ಹೊಸದಾಗಿ 30,000 ಆಕ್ಸಿಜನ್ ಬೆಡ್: ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದಾಗಿ 30,000 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದೆ. ಈಗ ರಾಜ್ಯಾದ್ಯಂತ ಒಟ್ಟು 60,000 ಆಕ್ಸಿಜನ್ ಬೆಡ್‌ಗಳಿವೆ. ಗ್ರಾಮೀಣಮಟ್ಟದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಅತ್ಯುತ್ತಮಪಡಿಸಲು ಸರ್ಕಾರ ನಿರ್ಧರಿಸಿದೆ. ಹಳ್ಳಿ ಪ್ರದೇಶದಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವುದನ್ನು ಮಾಡಲಾಗುತ್ತಿದೆ. ಇಡೀ ದೇಶದಲ್ಲೇ ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವಂತೆ ಮಾಡುವ ಪ್ರಯತ್ನ ನಡೆದಿದೆ ಎಂದರು.