ಬೆಂಗಳೂರು: ಬಿಜೆಪಿಗೆ ಸೇರಲು ಮುನಿರತ್ನ ಒಂದೇ ಒಂದು ರೂಪಾಯಿಯನ್ನು ಬಿಜೆಪಿಯಿಂದ ಪಡೆದಿಲ್ಲ. ಅವರು ಕಾಂಗ್ರೆಸ್ ಬಿಡಲು ಕಾರಣ ಯಾರು? ಯಾರು ಅವರನ್ನು ಪಕ್ಷದಿಂದ ಕಳುಹಿಸಿದರು ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಮಾಣ ಮಾಡಿ ಹೇಳಲಿ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಸವಾಲು ಹಾಕಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಯಾರು ಅನ್ನೋದನ್ನು ಡಿಕೆಶಿ ಬಹಿರಂಗಪಡಿಸಲಿ: ಡಿಸಿಎಂ ಸವಾಲು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಮುನಿರತ್ನ ಪಕ್ಷ ಬಿಡುವ ಸನ್ನಿವೇಶ ಇರಲಿಲ್ಲ, ಪಕ್ಷ ಬಿಡಲು ಹೇಳಿದವರು ಯಾರು ಎನ್ನುವ ಸತ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಲಿ, ಹಿಂದೆ ಸಮ್ಮಿಶ್ರ ಸರ್ಕಾರ ರಚಿಸಿ ಜೋಡಿ ಎತ್ತುಗಳು ಎಂದು ಹೇಳಿಕೊಂಡು ಬಂಡೆಯಂತೆ ಸರ್ಕಾರದ ಜೊತೆ ಇರುತ್ತೇನೆ. ಸರ್ಕಾರ ಬೀಳಲು ಅವಕಾಶ ನೀಡಲ್ಲ ಎನ್ನುತ್ತ ಅವರ ಜೊತೆಯಲ್ಲಿದ್ದುಕೊಂಡೇ ಮೋಸ ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಡಿಸಿಎಂ ಅಶ್ವತ್ಥ್ ನಾಯಾರಣ ಆರೋಪಿಸಿದ್ದಾರೆ.
ಬಿಜೆಪಿ ನಗರ ಜಿಲ್ಲಾ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿಪಕ್ಷದವರು ಹುನ್ನಾರ, ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಡೆಯುವ ಕಲ್ಪನೆಯಲ್ಲಿ ಅವರು ಇರಲಿಲ್ಲ, ಪ್ರಕರಣ ಕೋರ್ಟ್ನಲ್ಲೇ ಮುಂದುವರೆಯುತ್ತೆ ಅಂದುಕೊಂಡಿದ್ದರು. ಆದರೆ ಅದು ಇದೆಲ್ಲಾ ಹುಸಿಯಾಗಿ ಕೋರ್ಟ್ ಮುನಿರತ್ನ ಪರವಾಗಿ ತೀರ್ಪು ನೀಡಿದೆ, ಉಪಚುನಾವಣೆ ನಡೆಯಲು ಅವಕಾಶ ಕಲ್ಪಿಸಿದೆ ಎಂದರು.
ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಅವರಿಗೆ ನೈತಿಕತೆ ಇಲ್ಲ ಎನ್ನುವ ಆಪಾದನೆಯನ್ನು ಡಿಕೆಶಿ ಮಾಡಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ಗೆ ಮುನಿರತ್ನ ಆಪ್ತರಾಗಿದ್ದರು. ಇಂದು ಆ ಪಕ್ಷ ಬಿಡಲು ಏನು ಕಾರಣ, ಯಾರು ಕಳಿಸಿಕೊಟ್ಟರು? ಅವರ ಪಾಡಿಗೆ ಅವರಿದ್ದರೂ ಅವರನ್ನು ಕಳಿಸಿಕೊಟ್ಟವರು ಯಾರು ಎಂಬುದನ್ನು ಹೇಳುವ ಧೈರ್ಯವನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ತೋರಲಿ ಎಂದರು.
ಡಿಕೆಶಿ ಮೀರ್ ಸಾದಿಕ್
ನಿಜವಾದ ಮೀರ್ ಸಾದಿಕ್ ಎಂದರೆ ಅದು ಡಿ.ಕೆ. ಶಿವಕುಮಾರ್. ಜೊತೆಯಲ್ಲೇ ಇದ್ದು ಮೋಸ ಮಾಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ಡಿಕೆಶಿ ನಂಬಿಕೆ ದ್ರೋಹ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಹಿಂದೆ 2008ರಲ್ಲಿ ಕುಮಾರಸ್ವಾಮಿ ಬಿಜೆಪಿಗೆ ಅನ್ಯಾಯ ಮಾಡಿದ್ದರು. ಈಗ ಡಿಕೆಶಿ ಮತ್ತು ಸಿದ್ದರಾಮಯ್ಯ ಮೈತ್ರಿ ಸರ್ಕಾರಕ್ಕೆ ಅನ್ಯಾಯ ಮಾಡಿದರು ಎಂದು ಎಂದು ಅಶ್ವತ್ಥ್ ನಾರಾಯಣ ಗಂಭೀರ ಆರೋಪ ಮಾಡಿದರು.